
ಕಡಬ ಮುಖ್ಯ ಪೇಟೆಯಲ್ಲಿ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುವ ವಿರುದ್ಧ ಜನಾಕ್ರೋಶ ವ್ಯಕ್ತವಾಗಿ, ಇತ್ತೀಚೆಗೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಆಡೊಂದನ್ನು ವಶಕ್ಕೆ ಪಡೆದು ಭಾರಿ ಸುದ್ದಿಯಾಗಿತ್ತು. ಆದರೆ, ಈ ಕಾರ್ಯಾಚರಣೆಯ ಬೆನ್ನಲ್ಲೇ ಆಗಸ್ಟ್ 12 ರಂದು ಕಡಬ ಹಾಗೂ ಕಳಾರ ವ್ಯಾಪ್ತಿಯಲ್ಲಿ ವಾರಸುದಾರರು ಮತ್ತೆ ಆಡುಗಳನ್ನು ಮುಖ್ಯ ರಸ್ತೆಯಲ್ಲೇ ಬಿಟ್ಟಿದ್ದು, ಪಟ್ಟಣ ಪಂಚಾಯತ್ ಕಟ್ಟುನಿಟ್ಟಿನ ದಂಡ ವಿಧಿಸದೇ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಡಬ: ಕಡಬ ಮುಖ್ಯ ಪೇಟೆಯಲ್ಲಿ ಸಾಕುಪ್ರಾಣಿಗಳನ್ನು ಉಸ್ತುವಾರಿಯಿಲ್ಲದೆ ರಸ್ತೆಗೆ ಬಿಡುವ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಾರ್ವಜನಿಕರ ದೂರಿನ ಮೇರೆಗೆ ರಸ್ತೆಯಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಆಡೊಂದನ್ನು ಕಡಬ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ಭಾರಿ ಸುದ್ದಿಯಾಗಿತ್ತು.
ಆದರೆ, ಪಟ್ಟಣ ಪಂಚಾಯತ್ನ ಈ ಕಾರ್ಯಾಚರಣೆ ಕೇವಲ ಒಂದೇ ದಿನಕ್ಕೆ ಸೀಮಿತವಾಯಿತೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಏಕೆಂದರೆ, ಆಡು ವಶಕ್ಕೆ ಪಡೆದ ದಿನದ ರಾತ್ರಿಯೇ ಮುಖ್ಯ ಪೇಟೆಯಲ್ಲಿ ಮತ್ತೆ ಆಡುಗಳು ಅಲೆದಾಡಿದ್ದು, ಇದೀಗ ಆಗಸ್ಟ್ 12 ರಂದು ಕಳಾರ ಹಾಗೂ ಕಡಬ ವ್ಯಾಪ್ತಿಯಲ್ಲಿ ವಾರಸುದಾರರು ಮುಖ್ಯ ರಸ್ತೆಯ ಪಕ್ಕದಲ್ಲೇ ಮತ್ತೆ ಆಡುಗಳನ್ನು ಬೇಕಾಬಿಟ್ಟಿ ಬಿಟ್ಟಿರುವುದು ಕಂಡುಬಂದಿದೆ.
ಸಾಮಾನ್ಯ ಸಭೆಯ ನಿರ್ಣಯ ಕಾಟಾಚಾರಕ್ಕೇ?:
ಕಡಬ ಪೇಟೆಯಲ್ಲಿ ದನ, ಆಡು ಸೇರಿದಂತೆ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಿರಂತರ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಆಡು, ದನಗಳಿಗೆ ಡಿಕ್ಕಿಯಾಗಿ ಅಪಘಾತಕ್ಕೊಳಗಾಗುವ ಅಪಾಯ ಹೆಚ್ಚಾಗಿದೆ. ಈ ಸಾರ್ವಜನಿಕ ಜನಾಕ್ರೋಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಕಡಬ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ, ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುವ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವ ಹಾಗೂ ದಂಡ ವಿಧಿಸುವ ಕುರಿತು ಅಧಿಕೃತ ನಿರ್ಣಯ ಕೈಗೊಳ್ಳಲಾಗಿತ್ತು.


ದಂಡ ವಿಧಿಸಲು ಸಾರ್ವಜನಿಕರ ಆಗ್ರಹ:
ಸಭೆಯಲ್ಲಿ ನಿರ್ಣಯ ಕೈಗೊಂಡು, ಒಂದೆರಡು ಆಡುಗಳನ್ನು ವಶಕ್ಕೆ ಪಡೆದು ಪಟ್ಟಣ ಪಂಚಾಯತ್ ಕೈತೊಳೆದುಕೊಂಡಿದೆ ಹೊರತು ಮಾಲೀಕರಿಗೆ ಸೂಕ್ತ ದಂಡ ವಿಧಿಸಿಲ್ಲ. ಇದರಿಂದಾಗಿ ವಾರಸುದಾರರು ಯಾವುದೇ ಭಯವಿಲ್ಲದೆ ಮತ್ತೆ ಸಾಕುಪ್ರಾಣಿಗಳನ್ನು ರಸ್ತೆಗೆ ತಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿ ಬರುತ್ತಿದೆ
“ಪಟ್ಟಣ ಪಂಚಾಯತ್ ಅಧಿಕಾರಿಗಳು ಕೇವಲ ಪ್ರದರ್ಶನಕ್ಕಾಗಿ ಕಾರ್ಯಾಚರಣೆ ನಡೆಸದೆ, ರಸ್ತೆಗೆ ಆಡು-ದನಗಳನ್ನು ಬಿಡುವ ಮಾಲೀಕರನ್ನು ಪತ್ತೆಹಚ್ಚಿ ಭಾರಿ ಮೊತ್ತದ ದಂಡ ವಿಧಿಸಬೇಕು ಮತ್ತು ಪ್ರಾಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.
