
ಬಂದಾರು ಗ್ರಾಮದ ನಿರ್ಮುಡ ಎಂಬಲ್ಲಿ ಕೋಳಿ ಅಂಕ ನಡೆಸಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಆಗಸ್ಟ್ 3ರಂದು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ದ್ವಿಚಕ್ರ ವಾಹನಗಳು, ಕೋಳಿಗಳು ಹಾಗೂ ನಗದು ಸೇರಿದಂತೆ ಒಟ್ಟು ₹74,370 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ


ಕಡಬ ಟೈಮ್ಸ್ (ದಕ್ಷಿಣ ಕನ್ನಡ): ಬಂದಾರು ಗ್ರಾಮದ ನಿರ್ಮುಡ ಎಂಬಲ್ಲಿ ಕೋಳಿ ಅಂಕ ನಡೆಸಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಆ.3ರಂದು ಸಂಜೆ 5.15ರ ಸುಮಾರಿಗೆ ಬೀಟ್ ಸಿಬ್ಬಂದಿಯಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ನೇತೃತ್ವದಲ್ಲಿ ನಿರ್ಮುಡ ಪ್ರದೇಶಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಕೋಳಿಗಳ ಕಾಲುಗಳಿಗೆ ಸಣ್ಣ ಕತ್ತಿ ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಡುವುದರ ಜತೆಗೆ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟ ನಡೆಸುತ್ತಿರುವುದು ಪತ್ತೆಯಾಗಿದೆ.


ಪೊಲೀಸರನ್ನು ಕಂಡ ಕೂಡಲೇ ಕೆಲವರು ಸ್ಥಳದಿಂದ ಪರಾರಿಯಾಗಿದ್ದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನಿರ್ಮುಡ ನಿವಾಸಿ ಧರ್ಣಪ್ಪ ಗೌಡ (38) ಹಾಗೂ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ನಿವಾಸಿ ಹರೀಶ್ ಎಸ್. (30) ಎಂಬವರನ್ನು ವಶಕ್ಕೆ ಪಡೆಯಲಾಗಿದೆ
ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ 350 ರೂ ನಗದು, ಎರಡು ಬಾಳು ಕತ್ತಿ, ವಿವಿಧ ಜಾತಿಯ ನಾಲ್ಕು ಕೋಳಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 74,370 ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 82 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
