
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಮಳೆಗಾಲದಲ್ಲಿ ಗುಂಡ್ಯ ಹೊಳೆ ಉಕ್ಕಿ ಹರಿದು ಸಂಪರ್ಕ ಕಡಿತಗೊಳ್ಳುತ್ತಿದ್ದು, ಗ್ರಾಮಸ್ಥರು ತೆಪ್ಪದ ಮೂಲಕ ಹೊಳೆ ದಾಟುವ ಪರಿಸ್ಥಿತಿಯಿದೆ. ಈ ಸಮಸ್ಯೆಯನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ರಾಮಕುಂಜ ಅವರು ಆಗಸ್ಟ್ 2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸೇತುವೆ ನಿರ್ಮಾಣಕ್ಕೆ PWD ಇಂಜಿನಿಯರ್ಗೆ ಅಂದಾಜುಪಟ್ಟಿ ತಯಾರಿಸಲು ಸೂಚಿಸಿದ್ದಾರೆ


ಕಡಬ:ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ಇಚ್ಲಂಪಾಡಿ ಸಂಪರ್ಕಿಸುವ ರಸ್ತೆಯ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಮಳೆಗಾಲದಲ್ಲಿ ಹರಿಯುವ ಹೊಳೆಯನ್ನು ದಾಟಲು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ನಿತ್ಯ ಜೀವ ಕೈಯಲ್ಲಿ ಹಿಡಿದು ಪರದಾಡುವಂತಾಗಿದೆ.
ಬೇಸಿಗೆಯಲ್ಲಿ ಗ್ರಾಮಸ್ಥರೇ ಸ್ವತಃ ಪಾಲ (ತಾತ್ಕಾಲಿಕ ಮರದ ಸೇತುವೆ) ರಚಿಸಿಕೊಂಡು ದಾಟುತ್ತಿದ್ದರಾದರೂ, ಮಳೆಗಾಲದಲ್ಲಿ ಗುಂಡ್ಯ ಹೊಳೆಯಲ್ಲಿ ಪ್ರವಾಹ ಬಂದಾಗ ಸುತ್ತಲೂ ನೀರು ಆವರಿಸಿ ಈ ಪಾಲ ಮುಳುಗಡೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಭಾಗದ 25ಕ್ಕೂ ಹೆಚ್ಚು ಕುಟುಂಬಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ‘ತೆಪ್ಪ’ ಒಂದೇ ಏಕೈಕ ಆಸರೆಯಾಗಿದೆ.
ಹಲವು ವರ್ಷಗಳ ಬೇಡಿಕೆ; ಈಡೇರದ ಸೇತುವೆ ಭಾಗ್ಯ:
ಇಲ್ಲಿ ಖಾಯಂ ಸೇತುವೆ ನಿರ್ಮಿಸಬೇಕೆಂದು ಈ ಭಾಗದ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಪ್ರತಿ ಬಾರಿಯೂ ಬರೀ ಭರವಸೆಗಳು ಸಿಕ್ಕಿವೆಯೇ ಹೊರತು ಸೇತುವೆ ನಿರ್ಮಾಣ ಮಾತ್ರ ನೆರವೇರಿಲ್ಲ ಎಂಬ ಆಕ್ರೋಶ ಸ್ಥಳೀಯರಲ್ಲಿ ಮನೆಮಾಡಿದೆ.


ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ರಾಮಕುಂಜ ಭೇಟಿ, ಭರವಸೆ:
ಇಲ್ಲಿನ ಪರಿಸ್ಥಿತಿಯ ಕುರಿತು ಗ್ರಾಮಸ್ಥರು ಕಾಂಗ್ರೆಸ್ ಮುಖಂಡ ಕರುಣಾಕರ ಗೌಡ ದೊಡ್ಡಉರ್ಕ ಅವರ ಗಮನಕ್ಕೆ ತಂದಿದ್ದರು. ಅವರ ಮನವಿಯ ಮೇರೆಗೆ ಆಗಸ್ಟ್ 2ರಂದು ಬೆಳಿಗ್ಗೆ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ರಾಮಕುಂಜ ಹಾಗೂ ಕರುಣಾಕರ ಗೌಡ ದೊಡ್ಡಉರ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲೇ ಉಪಸ್ಥಿತರಿದ್ದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿ. ಕೃಷ್ಣಪ್ಪ ಅವರು, ತಕ್ಷಣವೇ ದೂರವಾಣಿ ಮೂಲಕ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ ಅನ್ನು ಸಂಪರ್ಕಿಸಿ, ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಅಂದಾಜುಪಟ್ಟಿ (Estimate) ತಯಾರಿಸುವಂತೆ ಸೂಚನೆ ನೀಡಿದರು. ಅಲ್ಲದೆ ಸರ್ಕಾರಕ್ಕೆ ಸೂಕ್ತ ಮನವಿ ಸಲ್ಲಿಸಿ ಆದಷ್ಟು ಶೀಘ್ರ ಸೇತುವೆ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
