ಯೆಡಕುಮರಿ–ಶಿರಿಬಾಗಿಲು ನಡುವೆ ರೈಲು ಹಳಿಯಲ್ಲಿ ಭೂಕುಸಿತ|ಬೆಂಗಳೂರು- ಮಂಗಳೂರು ರೈಲು ಮಾರ್ಗದಲ್ಲಿ ಸಂಚಾರ ರದ್ದು

kadaba times

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೈಸೂರು ವಿಭಾಗದ ಎಡಕುಮರಿ–ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ 8.45ಕ್ಕೆ ಭಾರಿ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮವಾಗಿ ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗದ ಪ್ರಮುಖ 7 ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿ ನೈಋತ್ಯ ರೈಲ್ವೆ ಆದೇಶಿಸಿದೆ.

kadaba times
uniq

ಪಶ್ಚಿಮ ಘಟ್ಟದ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಬಿಡದ ಧಾರಾಕಾರ ಮಳೆಯಿಂದಾಗಿ ಮೈಸೂರು ವಿಭಾಗದ ಯಡಕುಮರಿ  ಹಾಗೂ ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ (ಆಗಸ್ಟ್ 1) ರಾತ್ರಿ ಸುಮಾರು 8.45ರ ವೇಳೆಗೆ  ಭೂಕುಸಿತ ಸಂಭವಿಸಿರುವುದಾಗಿ ವರದಿಯಾಗಿದೆ.

​ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಮತ್ತು ಬಂಡೆಕಲ್ಲುಗಳು ಕುಸಿದುಬಿದ್ದಿರುವ ಪರಿಣಾಮ ಕರಾವಳಿ ಮತ್ತು ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕರಾವಳಿ ಮಾರ್ಗದ 7 ರೈಲುಗಳನ್ನು ಭಾಗಶಃ ರದ್ದುಗೊಳಿಸಿ, ತಾತ್ಕಾಲಿಕವಾಗಿ ಕಡಿಮೆ ದೂರಕ್ಕೆ ಸೀಮಿತಗೊಳಿಸಿ ನೈಋತ್ಯ ರೈಲ್ವೆ (South Western Railway) ಬುಲೆಟಿನ್ ಬಿಡುಗಡೆ ಮಾಡಿದೆ.

ರದ್ದಾದ ಹಾಗೂ ಮಾರ್ಗ ಬದಲಾದ ಪ್ರಮುಖ ರೈಲುಗಳ ವಿವರ:

​1. ಬೆಂಗಳೂರು/ವಿಜಯಪುರದಿಂದ ಹೊರಟ ರೈಲುಗಳು:

  • ​SMVT ಬೆಂಗಳೂರು–ಮುರುಡೇಶ್ವರ (16585): ಈ ರೈಲು ಹಾಸನದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದ್ದು, ಹಾಸನ–ಮುರುಡೇಶ್ವರ ನಡುವಿನ ಸಂಚಾರ ಸಂಪೂರ್ಣ ರದ್ದಾಗಿದೆ.
  • ​KSR ಬೆಂಗಳೂರು–ಕೊಝಿಕೋಡ್ (16511): ಹಾಸನದಲ್ಲೇ ಸ್ಥಗಿತಗೊಳ್ಳಲಿದ್ದು, ಹಾಸನ–ಕೋಝಿಕೋಡ್ ನಡುವೆ ಸಂಚಾರ ಇರುವುದಿಲ್ಲ.
  • ​ವಿಜಯಪುರ–ಮಂಗಳೂರು ಸೆಂಟ್ರಲ್ (17377): ಹಾಸನದಲ್ಲೇ ಪ್ರಯಾಣ ಅಂತ್ಯಗೊಳಿಸಲಿದ್ದು, ಹಾಸನ–ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವುದಿಲ್ಲ.
  • ​KSR ಬೆಂಗಳೂರು–ಕಾರವಾರ (16595): ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಸಕಲೇಶಪುರ–ಕಾರವಾರ ನಡುವಿನ ಸೇವೆ ಸ್ಥಗಿತಗೊಂಡಿದೆ.

​2. ಹಿಂತಿರುಗುವ ರೈಲುಗಳು (ಭಾಗಶಃ ರದ್ದು):

kadaba times
kadaba times
  • ​ಮುರುಡೇಶ್ವರ–SMVT ಬೆಂಗಳೂರು (16586): ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.
  • ​ಕೊಝಿಕೋಡ್–KSR ಬೆಂಗಳೂರು (16512): ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸಲಿದ್ದು, ಪುತ್ತೂರಿನಿಂದ ಬೆಂಗಳೂರಿನವರೆಗಿನ ಸೇವೆ ರದ್ದಾಗಿದೆ.
  • ​ಮಂಗಳೂರು ಸೆಂಟ್ರಲ್–ವಿಜಯಪುರ (17378): ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದ್ದು, ಅಲ್ಲಿಂದ ವಿಜಯಪುರದವರೆಗಿನ ಸೇವೆ ರದ್ದಾಗಿದೆ.

ಹಳಿ ದುರಸ್ತಿ ಕಾರ್ಯಾಚರಣೆ:

​ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಹಳಿಯ ಮೇಲಿನ ಮಣ್ಣು ಮತ್ತು ಬೃಹತ್ ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ತೀವ್ರ ಸವಾಲಾಗಿ ಪರಿಣಮಿಸಿದೆ. ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಅವರು ಮಾಹಿತಿ ನೀಡಿ, ಸ್ಥಳಕ್ಕೆ ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ರವಾನಿಸಲಾಗಿದ್ದು, ಕಾರ್ಯಾಚರಣೆ ಭರದಿಂದ ಸಾಗಿದೆ ಎಂದಿದ್ದಾರೆ.

​ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ರೈಲ್ವೆಯ ಅಧಿಕೃತ ಸಹಾಯವಾಣಿ ಹಾಗೂ ಪ್ರಕಟಣೆಗಳನ್ನು ಪರಿಶೀಲಿಸಿ ಪ್ರಯಾಣ ಬೆಳೆಸುವಂತೆ ಕೋರಲಾಗಿದೆ.

Related Articles

Latest Articles