
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೈಂಟ್ ಜೋಕಿಮ್ಸ್ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು


ಕಡಬ:ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆ ಇದರ ಜಂಟಿ ಆಶ್ರಯದಲ್ಲಿ ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.
ಕಲಿಕೆಯ ಜೊತೆಗೆ ಕ್ರೀಡೆಯೂ ಅಗತ್ಯ:
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಸೈಂಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ ಅವರು, “ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಕಲಿಕೆಗೆ ಸೀಮಿತವಾಗದೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ಸರ್ವಾಂಗೀಣ ಪ್ರಗತಿ ಹಾಗೂ ತಂದೆ-ತಾಯಂದಿರು, ಶಾಲೆಗೆ ಕೀರ್ತಿ ತರಲು ಸಾಧ್ಯವಾಗುತ್ತದೆ” ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸಿಲ್ವಿಯಾ ರೂತ್ ಕ್ಯಾಸ್ತೆಲಿನೋ, “ಕ್ರೀಡಾಂಗಣದಲ್ಲಿ ಸೋಲು-ಗೆಲುವು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬ ಕ್ರೀಡಾಪಟುವೂ ಸೋಲನ್ನು ಧೈರ್ಯವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವದಿಂದ ಪಂದ್ಯಾಟದಲ್ಲಿ ಭಾಗವಹಿಸಬೇಕು” ಎಂದರು.


ಪಂದ್ಯಾಟಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಕ್ಷೇವಿಯರ್ ಬೇಬಿ ಎಮ್.ಪಿ., “ವಿದ್ಯಾರ್ಥಿಗಳು ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಹೊಸ ಉತ್ಸಾಹ ಹಾಗೂ ದೈಹಿಕ-ಮಾನಸಿಕ ಚೈತನ್ಯ ವೃದ್ಧಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು. ಪುತ್ತೂರು ತಾಲೂಕು ಶಿಕ್ಷಣ ಸಂಯೋಜಕಿ ಶ್ರೀಮತಿ ಪುಷ್ಪಾವತಿ ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಜೆಸಿಂತಾ ವೇಗಸ್, ಪ್ರಾಥಮಿಕ ವಿಭಾಗದ ಕಡಬ ತಾಲೂಕು ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಶ್ರೀ ರಾಮಣ್ಣ, ಕಡಬ ತಾಲೂಕು ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ಶ್ರೀ ರಾಜೇಶ್ ನಾಯಕ್, ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಸುನಿಲ್ ಪ್ರವೀಣ್ ಪಿಂಟೋ, ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಗಣೇಶ್ ಡಿ. ಹಾಗೂ ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಲತಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್ ಎಲ್ಲರನ್ನೂ ಸ್ವಾಗತಿಸಿದರು. ಜೋಕಿಮ್ಸ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಕುಮಾರ್ ವಂದಿಸಿದರು. ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಪಿ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು
