
ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಗಾಳಿಗೆ ಅಡಿಕೆ ಮರವೊಂದು ಏಕಾಏಕಿ ಮುರಿದು ಮೈಮೇಲೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಗುತ್ತುಪಾಲು ಎಂಬಲ್ಲಿ ಜುಲೈ 31ರಂದು ಮಧ್ಯಾಹ್ನ ಸಂಭವಿಸಿದೆ.


ಕುಂತೂರು ಕೇವಳ ನಿವಾಸಿ ಯಾದವ ಗೌಡ (66 ವರ್ಷ) ಮೃತಪಟ್ಟ ದುರ್ದೈವಿ.
ಯಾದವ ಗೌಡ ಅವರು ಜುಲೈ 31ರಂದು ಮಧ್ಯಾಹ್ನದ ವೇಳೆಗೆ ಕುಂತೂರಿನ ಗುತ್ತುಪಾಲು ಎಂಬಲ್ಲಿರುವ ತೋಟವೊಂದರಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿದ್ದು, ತೋಟದಲ್ಲಿದ್ದ ಅಡಿಕೆ ಮರವೊಂದು ಭಾರಿ ರಭಸಕ್ಕೆ ಮುರಿದು ನೇರವಾಗಿ ಯಾದವ ಗೌಡರ ಮೈಮೇಲೆಯೇ ಬಿದ್ದಿದೆ.


ಮರ ಬಿದ್ದ ಭರಕ್ಕೆ ಗಂಭೀರವಾಗಿ ಗಾಯಗೊಂಡ ಯಾದವ ಗೌಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯ ಸಮಯದಲ್ಲಿ ತೋಟದಲ್ಲಿ ಇತರೇ ಮೂವರು ಕಾರ್ಮಿಕರೂ ಕೆಲಸ ಮಾಡುತ್ತಿದ್ದು, ಅದೃಷ್ಟವಶಾತ್ ಅವರು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ
