
ಕಡಬ: ಪರಿಶಿಷ್ಟ ಜಾತಿ/ಪಂಗಡದ ಕುಂದುಕೊರತೆ ಸಭೆ – ಕಾಲನಿಗಳಿಗೆ ಭೇಟಿ, ವಿಶೇಷ ಕಂದಾಯ ಅದಾಲತ್, ಶಿಕ್ಷಣ, ಇಲಿಪಾಷಣ ನಿಯಂತ್ರಣ ಸೇರಿ ಹಲವು ಪ್ರಮುಖ ವಿಚಾರಗಳ ಚರ್ಚೆ


ಕಡಬ, ಜು. 26: ಕಡಬ ಠಾಣಾ ವ್ಯಾಪ್ತಿಯ 19 ಗ್ರಾಮಗಳಲ್ಲಿರುವ 49 ಪರಿಶಿಷ್ಟ ಜಾತಿ/ಪಂಗಡದ ಕಾಲನಿಗಳ ಪೈಕಿ ಈಗಾಗಲೇ 17 ಕಾಲನಿಗಳಿಗೆ ಖುದ್ದಾಗಿ ಭೇಟಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಕಾಲನಿಗಳಿಗೂ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ತಿಳಿಸಿದ್ದಾರೆ.
ಅವರು ಜುಲೈ 26ರಂದು ಕಡಬ ಠಾಣೆಯಲ್ಲಿ ನಡೆದ ಮಾಸಿಕ ಪರಿಶಿಷ್ಟ ಜಾತಿ/ಪಂಗಡದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಮಾತನಾಡಿದ ಅವರು, ಕಾಲನಿಗಳಲ್ಲಿ ದುಶ್ಚಟಗಳಿಗೆ ಯುವಕರು ಬಲಿಯಾಗದಂತೆ ಹಾಗೂ ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಮಧ್ಯದಲ್ಲೇ ಮೊಟಕುಗೊಳಿಸದಂತೆ ಬೀಟ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ಯುವಕ-ಯುವತಿಯರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಆರ್ಥಿಕ ಸಮಸ್ಯೆಗಳ ಕಾರಣದಿಂದ ಶಿಕ್ಷಣ ಅರ್ಧದಲ್ಲೇ ನಿಲ್ಲಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಪುಸ್ತಕಗಳ ಅಗತ್ಯವಿದ್ದರೂ ಅಥವಾ ಆರ್ಥಿಕ ನೆರವು ಬೇಕಾದರೂ ವೈಯಕ್ತಿಕ ನೆಲೆಯಲ್ಲಿ ಸಾಧ್ಯವಾದ ಸಹಾಯವನ್ನು ಮಾಡಲಾಗುವುದು ಎಂದು ಎಸ್.ಐ. ಜಂಬೂರಾಜ್ ಮಹಾಜನ್ ಭರವಸೆ ನೀಡಿದರು.
ವಿಶೇಷ ಕಂದಾಯ ಅದಾಲತ್ಗೆ ಒತ್ತಾಯ
ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳು ಎದುರಿಸುತ್ತಿರುವ ಜಮೀನು ಮತ್ತು ವಸತಿ ಸಮಸ್ಯೆಗಳ ಕುರಿತು ಪ್ರಮುಖ ಚರ್ಚೆ ನಡೆಯಿತು. ಅನೇಕ ಕುಟುಂಬಗಳು ವಸತಿ ನಿರ್ಮಿಸಿಕೊಳ್ಳಲು ಜಾಗದ ಪ್ಲಾಟಿಂಗ್ ಸಮಸ್ಯೆ ಎದುರಿಸುತ್ತಿದ್ದು, ಹಿರಿಯರ ಹೆಸರಿನಲ್ಲಿರುವ ಜಮೀನು ಈಗಿನ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಆಗದ ಕಾರಣ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಕಂದಾಯ ಅದಾಲತ್ ಆಯೋಜಿಸುವುದು ಅಗತ್ಯ ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಈ ವಿಚಾರಕ್ಕೆ ಧ್ವನಿಗೂಡಿಸಿದ ಮುಖಂಡರು, ಈ ಹಿಂದೆ ತಹಶೀಲ್ದಾರ್ ಅವರ ಗಮನಕ್ಕೆ ವಿಷಯ ತಂದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮತ್ತೋರ್ವರು ಮಾತನಾಡಿ, ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ದಲ್ಲಾಳಿಗಳ ಸಹಾಯವಿಲ್ಲದೆ ಕೆಲಸ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಬ ತಾಲೂಕು ಕಚೇರಿಯಲ್ಲಿಯೇ ಕನಿಷ್ಠ 15 ಮಂದಿ ದಲ್ಲಾಳಿಗಳು ಕಾಣಸಿಗುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಐ. ಜಂಬೂರಾಜ್ ಮಹಾಜನ್, ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕಾಗಿ ಅನಗತ್ಯವಾಗಿ ಅಲೆದಾಡಿಸಿದರೆ ಅಥವಾ ಹಣದ ಬೇಡಿಕೆ ಇಟ್ಟರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದರು. ಅಂತಹ ದೂರುಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದರು. ಇದರ ಜೊತೆಗೆ ಪರಿಶಿಷ್ಟ ಸಮುದಾಯದ ಜನರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಕಂದಾಯ ಅದಾಲತ್ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಕಡಬ ತಹಶೀಲ್ದಾರ್ ಅವರಿಗೆ ಪತ್ರ ಬರೆಯುವುದರೊಂದಿಗೆ, ವೃತ್ತ ನಿರೀಕ್ಷಕರ ಮೂಲಕ ಪುತ್ತೂರು ಉಪವಿಭಾಗಾಧಿಕಾರಿ (ಎಸಿ) ಅವರಿಗೂ ಪತ್ರ ಬರೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇಲಿಪಾಷಣ ನಿಯಂತ್ರಣಕ್ಕೆ ಕ್ರಮಕ್ಕೆ ಆಗ್ರಹ
ಸಭೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸಣ್ಣ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಇಲಿಪಾಷಣವನ್ನು ಯಾವುದೇ ನಿಯಂತ್ರಣವಿಲ್ಲದೆ ಅಂಗಡಿಗಳಲ್ಲಿ ಸುಲಭವಾಗಿ ಖರೀದಿಸುವ ಪರಿಸ್ಥಿತಿ ಇರುವುದರಿಂದ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.


ಕೀಟನಾಶಕಗಳು ಹಾಗೂ ಇಲಿಪಾಷಣಗಳು ಅಧಿಕೃತ ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಮಾತ್ರ ಲಭ್ಯವಾಗುವಂತೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಎಸ್.ಐ., ಈ ವಿಷಯದ ಕುರಿತು ಜಿಲ್ಲಾ ಆರೋಗ್ಯ ಇಲಾಖೆಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಆಲಂಕಾರಿನಲ್ಲಿ ಶಿಕ್ಷಣದಿಂದ ವಂಚಿತಳಾದ ಬಾಲಕಿಯ ಸಮಸ್ಯೆ
ಆಲಂಕಾರು ಗ್ರಾಮದ ನಾರ್ತಿಲ ಪ್ರದೇಶದಲ್ಲಿ ಕುಟುಂಬವೊಂದು ಟರ್ಪಾಲು ಹಾಕಿದ ಗುಡಿಸಲಿನಲ್ಲಿ ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದೆ ಎಂದು ಸಭೆಯಲ್ಲಿ ಸುಂದರ ಬೈರ ಪ್ರಸ್ತಾಪಿಸಿದರು. ಕುಟುಂಬದ ಯಜಮಾನ ಕಳೆದ ಒಂದು ವರ್ಷದಿಂದ ಮಲಗಿದ ಸ್ಥಿತಿಯಲ್ಲಿದ್ದು, ಪತ್ನಿ ಕೂಲಿ ಕೆಲಸಕ್ಕೆ ತೆರಳಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಳು ಶಾಲೆಗೆ ಹೋಗುತ್ತಿದ್ದರೆ ಮತ್ತೊಬ್ಬಳು ತಂದೆಯ ಆರೈಕೆಗಾಗಿ ಒಂಬತ್ತನೇ ತರಗತಿ ಪೂರ್ಣಗೊಳಿಸಿದ ಬಳಿಕ ಶಿಕ್ಷಣದಿಂದ ವಂಚಿತಳಾಗಿದ್ದಾಳೆ ಎಂದು ಅವರು ವಿವರಿಸಿದರು.
ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಪೊಲೀಸರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ನೆಲ್ಯಾಡಿ ಯುವಕನ ಸಾವಿನ ಪ್ರಕರಣದ ಕುರಿತು ಚರ್ಚೆ
ಇತ್ತೀಚೆಗೆ ನೆಲ್ಯಾಡಿ ಹೊರಠಾಣಾ ವ್ಯಾಪ್ತಿಯ ಪಡುಬೆಟ್ಟು ಸಮೀಪ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಾರ್ವಜನಿಕ ವಲಯದಲ್ಲಿ ಪರಿಶಿಷ್ಟ ಸಮುದಾಯದ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಕಾರಣ ಈ ಘಟನೆ ನಡೆದಿದ್ದು, ಇದು ಮರ್ಯಾದ ಹತ್ಯೆಯಾಗಿರಬಹುದೆಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಸಭೆಯಲ್ಲಿ ಕೆಲವು ಮುಖಂಡರು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಎಸ್.ಐ. ಜಂಬೂರಾಜ್ ಮಹಾಜನ್, ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಬಳಿ ಪೂರಕ ಮಾಹಿತಿ ಇದ್ದರೂ ಅದನ್ನು ಮನವಿ ರೂಪದಲ್ಲಿ ಮೇಲಾಧಿಕಾರಿಗಳಿಗೆ ಸಲ್ಲಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಸದಸ್ಯೆ ಕುಸುಮ, ಕೆ.ಪಿ. ಆನಂದ, ಸುಂದರ ಬೈರ, ಕೇಶವ ಗಾಂಧಿಪೇಟೆ, ಆನಂದ ಮಿತ್ತಬೈಲ್, ವಸಂತ ಕುಬುಲಾಡಿ ಹಾಗೂ ತಿಮ್ಮಪ್ಪ ವಿ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದು ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು. ಪೊಲೀಸ್ ಸಿಬ್ಬಂದಿ ಮಹೇಶ್ ಸಭೆಗೆ ಸ್ವಾಗತ ಕೋರಿದರೆ, ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.
