
“ಅಳಿದು ಹೋಗುವ ಮುನ್ನ ಒಂದಿಷ್ಟು ಅಳಿಲು ಸೇವೆ” ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಲ್ಯದ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡವು ತನ್ನ 25ನೇ ಸೇವಾಯೋಜನೆಯಲ್ಲಿ ಮಾನವೀಯತೆ ಮೆರೆದಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪ್ರಸಿದ್ಧ ನಾಟಿವೈದ್ಯೆ ಚೆನ್ನಮ್ಮ ಮಾದೇರಿಕೆ ಅವರಿಗೆ ತಂಡವು ₹25,000 ಆರ್ಥಿಕ ಸಹಾಯಧನ ಹಸ್ತಾಂತರಿಸಿದೆ.


ಅಳಿದು ಹೋಗುವ ಮುನ್ನ ಒಂದಿಷ್ಟು ಅಳಿಲು ಸೇವೆ” – ಈ ಸಾಲುಗಳನ್ನು ಬರಿ ಮಾತಿಗೆ ಸೀಮಿತಗೊಳಿಸದೆ, ತಮ್ಮ ಕಾಯಕದ ಮೂಲಕವೇ ಸಮಾಜಕ್ಕೆ ಮಾದರಿಯಾಗಿ ನಿಂತಿದೆ ಕಡಬ ತಾಲೂಕಿನ ಬಲ್ಯದ ‘ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡ’.
ತಂಡವು ತನ್ನ 25ನೇ ಸೇವಾಯೋಜನೆಯ ಭಾಗವಾಗಿ, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಟಿವೈದ್ಯೆ ಚೆನ್ನಮ್ಮ ಮಾದೇರಿಕೆ ಅವರಿಗೆ ₹25,000 (ಇಪ್ಪತ್ತೈದು ಸಾವಿರ ರೂಪಾಯಿ) ಆರ್ಥಿಕ ಸಹಾಯಧನವನ್ನು ಹಸ್ತಾಂತರಿಸುವ ಮೂಲಕ ಮತ್ತೊಮ್ಮೆ ಮಾನವೀಯ ಮಿಡಿತವನ್ನು ತೋರ್ಪಡಿಸಿದೆ.
ಸಮಾಜದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಸುಸಜ್ಜಿತ ಸೂರು ಎಂಬ ಮೂರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಕಷ್ಟಪಡುತ್ತಿರುವ ಅಶಕ್ತ ಕುಟುಂಬಗಳನ್ನು ಅತ್ಯಂತ ಕಾಳಜಿಯಿಂದ ಗುರುತಿಸಿ, ದಾನಿಗಳ ಉದಾರ ಸಹಕಾರದೊಂದಿಗೆ ನೆರವು ಒದಗಿಸುವುದು ಈ ಪರಿವರ್ತನಾ ತಂಡದ ಪ್ರಮುಖ ಉದ್ದೇಶವಾಗಿದೆ. ಕಳೆದ 22 ತಿಂಗಳಲ್ಲಿ ಬರೋಬ್ಬರಿ 25 ಬೃಹತ್ ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಈ ತಂಡದ ಸಮಾಜಮುಖಿ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.


ಜುಲೈ ತಿಂಗಳಲ್ಲಿ ಕೈಗೆತ್ತಿಕೊಂಡ 25ನೇ ಯೋಜನೆಯಲ್ಲಿ, ಸಾವಿರಾರು ಜನರಿಗೆ ನಾಟಿ ಔಷಧದ ಮೂಲಕ ಗುಣಮುಖರನ್ನಾಗಿಸಿದ್ದ, ಇದೀಗ ತಾವೇ ಅನಾರೋಗ್ಯದಿಂದ ನರಳುತ್ತಿರುವ ಹಿರಿಯ ಜೀವ ಚೆನ್ನಮ್ಮ ಮಾದೇರಿಕೆ ಅವರಿಗೆ ನೆರವಾಗುವ ಮೂಲಕ ತಂಡವು ತನ್ನ ಸೇವೆಯನ್ನು ಅರ್ಥಪೂರ್ಣವಾಗಿಸಿದೆ. ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ಕಾರ್ಯಗಳಿಗೆ ನಿರಂತರವಾಗಿ ಬೆನ್ನೆಲುಬಾಗಿ ನಿಲ್ಲುತ್ತಿರುವ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿ ನಾರಾಯಣ್ ಎನ್. ಕೊಲ್ಲಿಮಾರ್, ಹೊಸಮಠ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ, ಬದಿಕಾಪು ಉಳ್ಳಾಕ್ಲು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ, ಶ್ರೀ ಕ್ಷೇತ್ರ ಬಲ್ಯ ಧಾರ್ಮಿಕ ಉತ್ಸವ ಸಮಿತಿಯ ಪದಾಧಿಕಾರಿ ರಮೇಶ್ ಗೌಡ ನಾಲ್ಗುತ್ತು, ಪ್ರಮುಖರಾದ ವೆಂಕಟರಮಣ ಗೌಡ ದೇರಾಜೆ, ಪ್ರಸಾದ್ ಟೈಲರ್ ದೇರಾಜೆ ಹಾಗೂ ಬಾಲಕೃಷ್ಣ ಕೆರೆನಡ್ಕ ಅವರು ಭಾಗವಹಿಸಿ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ಅಧ್ಯಕ್ಷ ಉಮೇಶ್ ಬಂಗೇರ ಅವರು ಆಗಮಿಸಿದ ಎಲ್ಲಾ ಅತಿಥಿಗಳನ್ನು ಹಾಗೂ ದಾನಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸನತ್ ಗೌಡ ಪಟ್ಟೆ ಅವರು ವಂದನಾರ್ಪಣೆ ನೆರವೇರಿಸಿದರು.
