ಕಡಬ: ವಾಟ್ಸಾಪ್ ಗ್ರೂಪ್‌ಗಳಲ್ಲಿ ‘ಲೇಡಿ’ ಎಂದು ಲೇವಡಿ :ಬಿಳಿನೆಲೆಯ ಮೂವರ ವಿರುದ್ದ FIR

ಬಿಳಿನೆಲೆ ಪಂಚಾಯತ್ ಮಹಿಳಾ ಪಿಡಿಒಗೆ ಕಿರುಕುಳ ಆರೋಪ

kadaba times

ಕಡಬ: ಸರಕಾರಿ ಕೆಲಸಗಳಿಗೆ ಅಡ್ಡಿಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದರ ಜೊತೆಗೆ  ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಳಿನೆಲೆ ಗ್ರಾಮ ಪಂಚಾಯತ್‌ನ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಬಿಳಿನೆಲೆಯ ಪ್ರಸಾದ್ ಕೆ.ಜಿ., ಜೂಲಿಯಾನ ಮತ್ತು ಸಜಿತ್ ಕುಮಾರ್ ದೂರು ದಾಖಲಾಗಿರುವ ಆರೋಪಿಗಳು. ಬಿಳಿನೆಲೆ ಪಂಚಾಯತ್ ಪಿಡಿಒ ಶ್ರೀಮತಿ ಚಂದ್ರಾವತಿ ಅವರು ಈ ದೂರು ನೀಡಿದ್ದಾರೆ.

ಕಿರುಕುಳಕ್ಕೆ ಕಾರಣವೇನು? ಆರೋಪಿಗಳು ಪಂಚಾಯತ್ ವ್ಯಾಪ್ತಿಯಲ್ಲಿ ನಿಯಮಬಾಹಿರ ಕೆಲಸಗಳನ್ನು ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಸೂಕ್ತ ದಾಖಲೆಗಳಿಲ್ಲದ ಕಾರಣ ಪಿಡಿಒ ಅವರು ಕೆಲಸ ಮಾಡಿಕೊಟ್ಟಿರಲಿಲ್ಲ. ಇದರಿಂದ ಹಗೆ ಸಾಧಿಸಿದ ಆರೋಪಿಗಳ ತಂಡ, ಕಳೆದ 11 ತಿಂಗಳುಗಳಿಂದ ಪಿಡಿಒ ಹಾಗೂ ಪಂಚಾಯತ್‌ನ ಮಹಿಳಾ ಸಿಬ್ಬಂದಿಗೆ ನಿರಂತರ ಮಾನಸಿಕ ಹಿಂಸೆ ನೀಡುತ್ತಾ ಬಂದಿದೆ ಎಂದು ದೂರಲಾಗಿದೆ.

ದೂರಿನಲ್ಲಿರುವ ಮುಖ್ಯ ಆರೋಪಗಳು:

  • ವಾಟ್ಸಾಪ್ ಮೂಲಕ ದಬ್ಬಾಳಿಕೆ: ಆರೋಪಿಗಳು ‘ನಮ್ಮ ಗ್ರಾಮ ಬಿಳಿನೆಲೆ ನಮ್ಮ ವಾರ್ಡ್-ನಮ್ಮ ಹೊಣೆ’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ, ಪಿಡಿಒ ಅವರ ನಂಬರ್ ಸೇರಿಸಿದ್ದರು. ಅಧಿಕಾರಿಗಳು ಗ್ರೂಪ್‌ನಿಂದ ಹೊರಹೋದರೆ ಕಚೇರಿಗೆ ಬಂದು ವಿಡಿಯೋ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ಜುಲೈ 8 ರಂದು ಕಚೇರಿಗೆ ನುಗ್ಗಿ ವಿಡಿಯೋ ಮಾಡಿಕೊಂಡಿದ್ದಾರೆ.

    kadaba times
    kadaba times
  • ಶ್ರಮದಾನದ ವೇಳೆ ಅವಹೇಳನ: ಜುಲೈ 4 ರಂದು ನಡೆದ “ಸ್ವಚ್ಛ ಶನಿವಾರ” ಶ್ರಮದಾನದ ವೇಳೆ ಕಾರು, ಬೈಕ್‌ಗಳಲ್ಲಿ ಬಂದು ಮಹಿಳಾ ಸಿಬ್ಬಂದಿಯ ವಿಡಿಯೋ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಅಧಿಕಾರಿಗಳನ್ನು “ರೋಡ್ ಶೋ” ಎಂದು ಲೇವಡಿ ಮಾಡಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಬೇಸತ್ತು ಸಾರ್ವಜನಿಕ ಮಹಿಳೆಯರು ಸ್ವಚ್ಛತಾ ಕಾರ್ಯದಿಂದ ದೂರ ಉಳಿಯುವಂತಾಗಿದೆ.

  • ಲೈಂಗಿಕ ಕಿರುಕುಳದಂತಹ ವರ್ತನೆ :  ಕಚೇರಿಯಲ್ಲಿ ಕೇವಲ ಮಹಿಳಾ ಸಿಬ್ಬಂದಿ ಇರುವುದನ್ನು ಬಳಸಿಕೊಂಡ ಆರೋಪಿಗಳು, ಸಂಜೆ 6 ಗಂಟೆಯ ನಂತರವೂ ಕಚೇರಿಯಲ್ಲಿ ಕುಳಿತು ಮಾಹಿತಿ ನೀಡುವಂತೆ ಹಠ ಹಿಡಿಯುತ್ತಿದ್ದರು. ಕೆಟ್ಟ ದೃಷ್ಟಿಯಿಂದ ಲೈಂಗಿಕ ಕಿರುಕುಳ ನೀಡುವ ರೀತಿಯಲ್ಲಿ ಮಾತನಾಡುತ್ತಾ ಮಹಿಳಾ ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದ್ದಾರೆ ಎಂದು ಪಿಡಿಒ ತಿಳಿಸಿದ್ದಾರೆ.

ಇದಲ್ಲದೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪಿಡಿಒ ಅವರನ್ನು ‘ಲೇಡಿ’ ಎಂದು ಲೇವಡಿ ಮಾಡಿ ಆತ್ಮಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಿದ್ದಾರೆ ಹಾಗೂ ತಪ್ಪು ಮಾಹಿತಿ ಹರಡಿ ಕಚೇರಿಯ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಹಾಗೂ ಮನೆಯವರ ಜೊತೆ ಚರ್ಚಿಸಿ ತಡವಾಗಿ ದೂರು ನೀಡಲಾಗಿದ್ದು, ಕಡಬ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Latest Articles