
ಮಂಗಳೂರು: ನಗರವನ್ನು “ಡ್ರಗ್ಸ್ ಫ್ರೀ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಬೃಹತ್ ಯಶಸ್ಸು ಸಿಕ್ಕಿದೆ. ದೇಶದ ರಾಜಧಾನಿ ದೆಹಲಿಯಿಂದ ಕಾರಿನ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಇಬ್ಬರು ಅಂತಾರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ ದಸ್ತಗಿರಿ ಮಾಡಲಾಗಿದೆ.


ಬಂಧಿತರಿಂದ ಬರೋಬ್ಬರಿ 5 ಕೋಟಿ 20 ಲಕ್ಷ ರೂ. ಮೌಲ್ಯದ 5 ಕೆಜಿ 196 ಗ್ರಾಂ ತೂಕದ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಜ್ (28 ವರ್ಷ), ಲಾಯಿಲ ಗ್ರಾಮದ ಹಳೆಪೇಟೆ ನಿವಾಸಿ ಮೊಹಮ್ಮದ್ ಮುಸ್ತಾಫಾ (28 ವರ್ಷ) ಬಂಧಿತ ಆರೋಪಿಗಳು.
ಸುರತ್ಕಲ್ ಪ್ರಕರಣದ ತನಿಖೆ ವೇಳೆ ಸಿಕ್ಕಿತ್ತು ಲಿಂಕ್:
ಈ ಬೃಹತ್ ಜಾಲ ಪತ್ತೆಯಾಗಲು ಜೂನ್ 25 ರಂದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಯಾಚರಣೆ ಮೂಲ ಕಾರಣವಾಗಿದೆ. ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಿ 1.50 ಲಕ್ಷ ರೂ. ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮುಖ್ಯ ಕಿಂಗ್ಪಿನ್ಗಳ ಬೆನ್ನಟ್ಟಿದ್ದರು.
ಬಾಗಲಕೋಟೆ ಲಾಡ್ಜ್ ಮೇಲೆ ಸಿಸಿಬಿ ಮಿಂಚಿನ ದಾಳಿ:
ಮುಖ್ಯ ಡ್ರಗ್ ಪೆಡ್ಲರ್ಗಳು ದೆಹಲಿಯಿಂದ ಬೃಹತ್ ಪ್ರಮಾಣದ ಮಾದಕ ವಸ್ತುವನ್ನು ಖರೀದಿಸಿ ಕಾರಿನಲ್ಲಿ ಬೆಂಗಳೂರಿನ ಕಡೆಗೆ ಬರುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಜುಲೈ 15 ರಂದು ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ, ಬಾಗಲಕೋಟೆ ಜಿಲ್ಲೆಯ ಹುನಗುಂದದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ರಾಯಲ್ ಇನ್ ಲಾಡ್ಜ್’ ಮೇಲೆ ಮಿಂಚಿನ ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಡ್ರಗ್ಸ್ ಮಾತ್ರವಲ್ಲದೆ ಬ್ಯಾಗ್ ಹಾಗೂ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.


ಬೆಂಗಳೂರು ಕೇಂದ್ರವಾಗಿಸಿ ದಕ್ಷಿಣ ಕರಾವಳಿ ಹಾಗೂ ಕೇರಳಕ್ಕೆ ನೆಟ್ವರ್ಕ್:
ಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ಅಲ್ಫಾಜ್ ಎಂಬಾತನ ವಿರುದ್ಧ ಈಗಾಗಲೇ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟ ಮಾಡಿದ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಕಾರಿನ ಮೂಲಕ ದೆಹಲಿಯಿಂದ ಮಾದಕ ವಸ್ತು ತಂದು, ಬೆಂಗಳೂರನ್ನು ತಮ್ಮ ಮುಖ್ಯ ಕೇಂದ್ರವಾಗಿಸಿಕೊಂಡಿದ್ದರು. ಅಲ್ಲಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ನೆರೆರಾಜ್ಯ ಕೇರಳದ ಇತರೆ ಭಾಗಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಅಂತರರಾಜ್ಯ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಸಿಸಿಬಿ ಪೊಲೀಸರು ಜಾಲದ ಬೇರು ಸಡಲಿಸಲು ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ. ಈ ಅತ್ಯಂತ ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
