
ಬಂಟ್ವಾಳ: ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಸೋಮವಾರ ಮುಂಜಾನೆ ಜಿಲ್ಲೆಯನ್ನು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕಾಲೇಜಿಗೆ ತೆರಳುವ ಸಲುವಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಏಕಾಏಕಿ ಮಾರಣಾಂತಿಕ ದಾಳಿ ನಡೆಸಿದ್ದಾನೆ.


ಮಚ್ಚಿನಿಂದ ವಿದ್ಯಾರ್ಥಿನಿಯ ತಲೆ ಹಾಗೂ ಕೈಗೆ ಮನಸೋಇಚ್ಛೆ ಕೊಚ್ಚಿ ತೀವ್ರವಾಗಿ ಗಾಯಗೊಳಿಸಿರುವ ಆತಂಕಕಾರಿ ಘಟನೆ ಜುಲೈ 6ರ ಸೋಮವಾರ ಬೆಳಗ್ಗೆ ಸಂಭವಿಸಿದೆ. ಕೃತ್ಯ ಎಸಗಿದ ಬಳಿಕ ಆರೋಪಿಯು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬಂಟ್ವಾಳ ಮಂಚಿ ನಿವಾಸಿ, ಸ್ಥಳೀಯವಾಗಿ ವ್ಯಾಪಾರಿಯಾಗಿರುವ ಮೊಹಮ್ಮದ್ ಜವ್ವಾರ್ (28) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕನಾಗಿದ್ದಾನೆ.
ಬಸ್ಗಾಗಿ ಕಾಯುತ್ತಿದ್ದಾಗ ಏಕಾಏಕಿ ದಾಳಿ
ಪೊಲೀಸ್ ಇಲಾಖೆಯ ಅಧಿಕೃತ ಮಾಧ್ಯಮ ಪ್ರಕಟಣೆಯ ಪ್ರಕಾರ, ಸೋಮವಾರ ಬೆಳಗ್ಗೆ ಸುಮಾರು 08:45 ರ ವೇಳೆಗೆ 17 ವರ್ಷದ ಅಪ್ರಾಪ್ತ ಬಾಲಕಿಯು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾ ಗ್ರಾಮದ ಬಂಟ್ವಾಳ ಮೊಂತಿಮಾರು ಬಸ್ ನಿಲ್ದಾಣದ ಬಳಿ ಕಾಲೇಜಿಗೆ ಹೋಗಲು ನಿಂತಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಮಾರಕಾಸ್ತ್ರದೊಂದಿಗೆ ಧಾವಿಸಿದ ಆರೋಪಿ ಮೊಹಮ್ಮದ್ ಜವ್ವಾರ್, ಏನೂ ಅರಿಯದ ಬಾಲಕಿಯ ಮೇಲೆ ಏಕಾಏಕಿ ಮಚ್ಚಿನಿಂದ ಭೀಕರವಾಗಿ ಬೀಸಿದ್ದಾನೆ. ದಾಳಿಯ ತೀವ್ರತೆಗೆ ಬಾಲಕಿಯ ತಲೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ.


ಠಾಣೆಗೆ ಬಂದು ಶರಣಾದ ಆರೋಪಿ
ಜನನಿಬಿಡ ಬಸ್ ನಿಲ್ದಾಣದಲ್ಲೇ ಸಾರ್ವಜನಿಕರ ಕಣ್ಣೆದುರೇ ಈ ರಕ್ತಪಾತದ ಕೃತ್ಯ ನಡೆಸಿದ ಬಳಿಕ ಆರೋಪಿ ಮೊಹಮ್ಮದ್ ಜವ್ವಾರ್ ಅಲ್ಲಿಂದ ನೇರವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಓಡಿ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ನಡುರಸ್ತೆಯಲ್ಲೇ ಯುವತಿಯ ಮೇಲೆ ನಡೆದ ಈ ಭೀಕರ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೇರಳಕಟ್ಟೆ ಆಸ್ಪತ್ರೆಗೆ ದಾಖಲು
ರಕ್ತದ ಮಡುವಿನಲ್ಲಿ ನರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ತಕ್ಷಣವೇ ಸ್ಥಳೀಯರು ಹಾಗೂ ದಾರಿಹೋಕರು ಮಂಗಳೂರು ತಾಲೂಕಿನ ದೇರಳಕಟ್ಟೆಯ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ತಲೆ ಮತ್ತು ಕೈಗೆ ಭೀಕರ ಗಾಯಗಳಾಗಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು, ವೈದ್ಯರು ಯುದ್ಧೋಪಾದಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬಾಲಕಿಯು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
