
ಕಡಬ: ಜೇಸಿಐ ಕಡಬ ಕದಂಬ ಹಾಗೂ ರೈತಕುಡ್ಲ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಜೂನ್ 26, 27 ಮತ್ತು 28 ರಂದು ಕಡಬದ ಅನುಗ್ರಹ ಸಭಾಂಗಣದಲ್ಲಿ “ಹಲಸು ಮೇಳ ಮತ್ತು ಕೃಷಿ ಉತ್ಸವ” ಜರುಗಲಿದೆ. ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ.


-
ಜೂನ್ 26 (ಉದ್ಘಾಟನೆ): ಬೆಳಗ್ಗೆ 10:30ಕ್ಕೆ ಕೃಷಿಕ ಪಿ. ವಿಶ್ವೇಶ್ವರ ಭಟ್ ಮಳಿಗೆಗಳನ್ನು ಹಾಗೂ ಸಾಯಂಕಾಲ 3:30ಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಹಲಸು ರಾಯಭಾರಿ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
-
ಜೂನ್ 27 (ಸಂವಾದ): ಸಾಯಂಕಾಲ 4 ಗಂಟೆಗೆ ಹಣ್ಣು ಬೆಳೆಗಾರ ಕೃಷ್ಣ ಶೆಟ್ಟಿ ಅವರೊಂದಿಗೆ “ಹಣ್ಣುಗಳೊಂದಿಗೆ ನಾವು ನೀವು” ಮಾತುಕತೆ ನಡೆಯಲಿದೆ.
-
ಜೂನ್ 28 (ತರಬೇತಿ ಮತ್ತು ಸ್ಪರ್ಧೆ): ಬೆಳಗ್ಗೆ 11 ಗಂಟೆಗೆ ಚೇತನ್ ಅವರಿಂದ ಕಸಿ ಕಟ್ಟುವ ತರಬೇತಿ ಹಾಗೂ ನಂತರ ಹಲಸು ಭಾರ ಎತ್ತುವ ಮತ್ತು ಬಿಡಿಸುವ ಸ್ಪರ್ಧೆಗಳು ನಡೆಯಲಿವೆ.


ಪ್ರಮುಖ ಆಕರ್ಷಣೆಗಳು: ಮೇಳದಲ್ಲಿ ಕೆಂಪು, ಬಿಳಿ, ಬಂಗಾರ ವರ್ಣದ ಹಲಸು ಹಾಗೂ ಸಾವಯವ ಮಾವು ಮಾರಾಟಕ್ಕಿರಲಿವೆ. ಹಲಸಿನ ಹಪ್ಪಳ, ಚಿಪ್ಸ್, ಜ್ಯಾಮ್, ಹೋಳಿಗೆ, ದೋಸೆ, ಗಟ್ಟಿ ಮತ್ತು ಐಸ್ಕ್ರೀಮ್ ಮಳಿಗೆಗಳು ಇರಲಿವೆ. ಇದರೊಂದಿಗೆ ಕೃಷಿ ಯಂತ್ರಗಳು, ಸಲಕರಣೆಗಳು, ಹಣ್ಣು-ಹೂವಿನ ಗಿಡಗಳು ಹಾಗೂ ಮಹಿಳಾ ಗೃಹೋದ್ಯಮ ವಸ್ತುಗಳ ಪ್ರದರ್ಶನ ಇರಲಿದೆ.
ವಿಶೇಷ ಸ್ಪರ್ಧೆ: ಕಡಬ ತಾಲೂಕಿನ ಕೃಷಿಕರಿಗಾಗಿ “ವಿಶೇಷ ಬೆಳೆ ತನ್ನಿ ಬಹುಮಾನ ಗೆಲ್ಲಿ” ಸ್ಪರ್ಧೆ ಇದ್ದು, ಅಪರೂಪದ ಅಥವಾ ಆಕರ್ಷಕ ಬೆಳೆಗೆ ನಗದು ಬಹುಮಾನ ನೀಡಲಾಗುವುದು. ಈ ಬೆಳೆಗಳನ್ನು ಭಾನುವಾರ ಮಧ್ಯಾಹ್ನದ ಬಳಿಕ ಸ್ಥಳದಲ್ಲೇ ಮಾರಾಟ ಮಾಡಲು ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ವಲಯ ಅಧಿಕಾರಿಗಳಾದ ಕಾಶೀನಾಥ್ ಗೋಗಟೆ, ವಿಶ್ರುತಾ ರಾಜೇಶ್,
ಜೇಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್, ಕೃಷಲ್ ಡಿಸೋಜಾ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
