
ಕಡಬ: ಪ್ರಕೃತಿಯ ಅಪರೂಪದ ಕೊಡುಗೆ, ಬಡವರ ಕಲ್ಪವೃಕ್ಷ ಎಂದೇ ಕರೆಯಲ್ಪಡುವ ಹಲಸಿನ ಹಣ್ಣಿನ ಮೌಲ್ಯವರ್ಧನೆ ಹಾಗೂ ಕೃಷಿಕರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕಡಬದಲ್ಲಿ ಭರ್ಜರಿ ಕೃಷಿ ಉತ್ಸವವೊಂದು ಆಯೋಜನೆಗೊಂಡಿದೆ.


ಜೇಸಿಐ ಕಡಬ ಕದಂಬ ಹಾಗೂ ರೈತಕುಡ್ಲ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕದಂಬರ ನಾಡಿನ ಪ್ರಪ್ರಥಮ “ಹಲಸು ಮೇಳ ಕೃಷಿ ಉತ್ಸವ 2026” ಜೂನ್ 26, 27 ಮತ್ತು 28 ರಂದು ಕಡಬದ ಅನುಗ್ರಹ ಸಭಾಂಗಣದಲ್ಲಿ ಜರುಗಲಿದೆ.
ಹಲಸಿನ ವಿಶಿಷ್ಟ ಖಾದ್ಯಗಳು: ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಮೇಳದಲ್ಲಿ ಕೇವಲ ತರಹೇವಾರಿ ಹಲಸಿನ ಹಣ್ಣುಗಳ ಪ್ರದರ್ಶನ ಮಾತ್ರವಲ್ಲದೆ, ಆಹಾರ ಪ್ರಿಯರ ನಾಲಗೆಯ ರುಚಿ ಹೆಚ್ಚಿಸಲು ಹಲಸಿನ ಹಣ್ಣು ಮತ್ತು ಕಾಯಿಯಿಂದ ಸಿದ್ಧಪಡಿಸಿದ ಹತ್ತಾರು ಬಗೆಯ ವಿಶಿಷ್ಟ ಹಾಗೂ ಅಪರೂಪದ ಖಾದ್ಯಗಳು ಗ್ರಾಹಕರನ್ನು ಕೈಬೀಸಿ ಕರೆಯಲಿವೆ.
ಮೇಳದ ಪ್ರಮುಖ ಆಕರ್ಷಣೆಯಾಗಿ ಸಾಂಪ್ರದಾಯಿಕ ಶೈಲಿಯ ಹಲಸಿನ ಹಣ್ಣಿನ ದೋಸೆ, ಘಮಘಮಿಸುವ ಮೂಡೆ (ಕಡುಬು), ಸುವಾಸನಾಯುಕ್ತ ಹಲಸಿನ ಪಾಯಸ, ಗಾರಿಗೆ, ಕರಕುರಾದ ಹಪ್ಪಳ ಮತ್ತು ಹಣ್ಣಿನ ಸಂಡಿಗೆಗಳು ಲಭ್ಯವಿರಲಿವೆ. ಇದರೊಂದಿಗೆ ಇಂದಿನ ಪೀಳಿಗೆಯನ್ನು ಸೆಳೆಯಲು ಆಧುನಿಕ ಸ್ಪರ್ಶ ನೀಡಿ ಸಿದ್ಧಪಡಿಸಲಾದ ಪ್ರಸಿದ್ಧ ಹಲಸಿನ ಐಸ್ಕ್ರೀಮ್, ಜ್ಯೂಸಿ ಹಲ್ವಾ, ಮೌಲ್ಯವರ್ಧಿತ ಜ್ಯಾಮ್, ಸ್ಕ್ವಾಶ್ ಹಾಗೂ ಸಂಪೂರ್ಣ ಸಸ್ಯಾಹಾರಿಗಳ ನೆಚ್ಚಿನ ಹಲಸಿನ ಕಾಯಿಯ ಬಿರಿಯಾನಿ ಮತ್ತು ಮುಖ ಚಾಟ್ಸ್ ಪ್ರಿಯರಿಗಾಗಿ ಹಲಸಿನ ಕಬಾಬ್ಗಳಂತಹ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ತಿನಿಸುಗಳು ಸಾರ್ವಜನಿಕರ ಗಮನ ಸೆಳೆಯಲಿವೆ.


ಕೃಷಿಕರಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಸುವರ್ಣಾವಕಾಶ: ಬಹಳಷ್ಟು ಜನರಿಗೆ ಹಲಸಿನ ಹಣ್ಣನ್ನು ಕೇವಲ ತಿನ್ನಲು ಮಾತ್ರ ಬಳಸಬಹುದು ಎಂಬ ಕಲ್ಪನೆ ಇದೆ. ಆದರೆ ಈ ಮೇಳದ ಮೂಲಕ ಹಲಸನ್ನು ಬಳಸಿ ಹೇಗೆಲ್ಲಾ ಸ್ವಯಂ ಉದ್ಯೋಗ ಮಾಡಬಹುದು ಮತ್ತು ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬುದಕ್ಕೆ ಈ ಮೇಳವು ದಾರಿದೀಪವಾಗಲಿದೆ. ಕೃಷಿಕರಿಗೆ ತಜ್ಞರಿಂದ ಮಾಹಿತಿ ಮತ್ತು ನೇರ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಳಿಗೆಗಳ ಬುಕ್ಕಿಂಗ್ಗೆ ಮುಕ್ತ ಅವಕಾಶ: ಈ ಸುಂದರ ಕೃಷಿ ಮತ್ತು ಆಹಾರ ಉತ್ಸವದಲ್ಲಿ ತಾವೂ ಕೂಡ ಭಾಗವಹಿಸಿ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲು ಇಚ್ಛಿಸುವ ಆಸಕ್ತರು ತಮ್ಮ ಮಳಿಗೆಗಳನ್ನು (Stalls) ಕಾಯ್ದಿರಿಸಲು 94493 18553 ಅಥವಾ 861 814 0100 ಸಂಖ್ಯೆಯನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ವಿಶಿಷ್ಟ ಉತ್ಸವಕ್ಕೆ ಸಾರ್ವಜನಿಕರಿಗೆ, ಗ್ರಾಹಕರಿಗೆ ಹಾಗೂ ಕೃಷಿ ಆಸಕ್ತರಿಗೆ ಆಯೋಜಕರು ಪ್ರೀತಿಯ ಸ್ವಾಗತ ಕೋರಿದ್ದಾರೆ.
