ನಮ್ಮ ಕಡಬಕ್ಕೆ ಹೆಮ್ಮೆ: ಬೇಸಗೆ ರಜೆಯಲ್ಲಿ ಮೊಬೈಲ್ ಬಿಟ್ಟು ಕಾಡು ಸುತ್ತಿದ ಸವಣೂರಿನ ವಿದ್ಯಾರ್ಥಿನಿ

21 ಸೂಕ್ಷ್ಮ ಹೂವುಗಳ ಕುರಿತು 'ಟೈನಿ ವೈಲ್ಡ್ ಫ್ಲವರ್ಸ್' ಪುಸ್ತಕ ರಚನೆ

kadaba times

ಸವಣೂರು: ಸಾಮಾನ್ಯವಾಗಿ ಬೇಸಗೆ ರಜೆ ಬಂತೆಂದರೆ ಸಾಕು ಮಕ್ಕಳು ಟಿವಿ, ಮೊಬೈಲ್ ಗೇಮ್ಸ್ ಇಲ್ಲವೇ ನಾನಾ ಕಡೆ ಸುತ್ತಾಟ ನಡೆಸಿ ಸಂಭ್ರಮಿಸುವುದು ಸಹಜ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಬಳಿಯ ವಿದ್ಯಾರ್ಥಿನಿಯೊಬ್ಬರು ಈ ರಜಾ ಅವಧಿಯನ್ನು ಅತ್ಯಂತ ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಕಾಡು, ಗುಡ್ಡಗಳನ್ನು ಸುತ್ತಿರುವ ಈಕೆ, ಕಣ್ಣಿಗೆ ಸರಿಯಾಗಿ ಕಾಣಿಸದ ಅತ್ಯಂತ ಸೂಕ್ಷ್ಮ ಹೂವುಗಳ ಕುರಿತು ಅಧ್ಯಯನ ನಡೆಸಿ ಪುಸ್ತಕವೊಂದನ್ನು ಸಿದ್ಧಪಡಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

kadaba times
uniq

ಸವಣೂರು ಸಮೀಪದ ಪುಣ್ಚಪ್ಪಾಡಿ ನಡುಮನೆ ನಿವಾಸಿಗಳಾದ ವಿವೇಕ್ ಎಸ್. ಆಳ್ವ ಹಾಗೂ ಸ್ಮಿತಾ ವಿವೇಕ್ ದಂಪತಿಯ ಪುತ್ರಿ, ಪುತ್ತೂರಿನ ಸಂತ ವಿಕ್ಚರ್ಸ್ ಬಾಲಕಿಯರ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಎಸ್. ಆಳ್ವ ಈ ಅಪೂರ್ವ ಸಾಧನೆ ಮಾಡಿದ ಬಾಲಕಿ. ಆರಾಧ್ಯ ತಾನು ನಡೆಸಿದ ಅಪರೂಪದ ಅಧ್ಯಯನಕ್ಕೆ ‘ಟೈನಿ ವೈಲ್ಡ್ ಫ್ಲವರ್ಸ್’ (Tiny Wild Flowers) ಎಂದು ಹೆಸರಿಟ್ಟು ಪುಸ್ತಕ ರೂಪ ನೀಡಿದ್ದಾರೆ.

ಮೊಬೈಲ್ ಬಿಟ್ಟು ಪ್ರಕೃತಿಯತ್ತ ಹೆಜ್ಜೆ ಇಡಿಸಿದ ಪೋಷಕರ ‘ಟಾಸ್ಕ್’!

ಆರಾಧ್ಯ ಅವರ ತಂದೆ ಮತ್ತು ತಾಯಿ ಇಬ್ಬರೂ ಹಿಂದೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸದ್ಯ ತಂದೆ ಡಿಸೈನಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ, ತಾಯಿ ಸಸ್ಯಶಾಸ್ತ್ರ (Botany) ಉಪನ್ಯಾಸಕಿಯಾಗಿದ್ದಾರೆ. ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿವಿ ಲೋಕದಲ್ಲೇ ಮುಳುಗಿರದೆ ಪ್ರಕೃತಿಯೊಂದಿಗೆ ಬೆರೆಯಬೇಕು, ಪರಿಸರವನ್ನು ಅರ್ಥೈಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪೋಷಕರು ಮಕ್ಕಳಿಗೆ ಒಂದು ವಿಶೇಷ ಟಾಸ್ಕ್ ನೀಡಿದ್ದರು.

ಪೋಷಕರು ನೀಡಿದ ಈ ಸವಾಲನ್ನು ಅಷ್ಟೇ ಗಂಭೀರವಾಗಿ ಸ್ವೀಕರಿಸಿದ ಆರಾಧ್ಯ, ಬರೋಬ್ಬರಿ ಎರಡು ತಿಂಗಳ ಕಾಲ ಕಾಡು-ಮೇಡುಗಳನ್ನು ಸುತ್ತಿರುವರು. ಈ ಸಾಹಸಕ್ಕೆ ಆಕೆಯ ಸಹೋದರ ಅಹನ್ ಕೂಡ ಸಾಥ್ ನೀಡಿದ್ದಾರೆ.

ರಾತ್ರಿಯಿಡೀ ಓಡಾಟ, ಕಣ್ಣಿಗೆ ಕಾಣದ ಹೂವುಗಳ ಶೋಧ!

ಕಾಡಿನಲ್ಲಿ ಸಿಗುವ ಹೂವುಗಳು ತೀರಾ ಸೂಕ್ಷ್ಮವಾಗಿದ್ದು, ಕೆಲವು ಕಣ್ಣಿಗೂ ಸುಲಭವಾಗಿ ಪತ್ತೆಯಾಗುವುದಿಲ್ಲ. ಅಂತಹ ಹೂವುಗಳನ್ನು ಹುಡುಕಾಡಿ ಆರಾಧ್ಯ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕೆಲವು ಹೂವುಗಳು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ಅರಳುವುದರಿಂದ, ರಾತ್ರಿಯೂ ಕಾಡಿನಲ್ಲಿ ಓಡಾಡಿ ಛಾಯಾಗ್ರಹಣ ಮಾಡಿದ್ದಾರೆ. ಮುಂಜಾನೆ ಹಾಗೂ ಸಂಜೆಯ ವಿಭಿನ್ನ ಅವಧಿಗಳಲ್ಲಿ ಅರಳುವ ಒಟ್ಟು 21 ಬಗೆಯ ಅಪರೂಪದ ಹೂವುಗಳನ್ನು ಇವರು ಗುರುತಿಸಿದ್ದಾರೆ.

kadaba times
kadaba times
ವೈಜ್ಞಾನಿಕ ಹಿನ್ನೆಲೆಯೊಂದಿಗೆ ಪುಟ ವಿನ್ಯಾಸ

ಕೇವಲ ಫೋಟೋ ತೆಗೆಯುವುದಷ್ಟಕ್ಕೆ ಸೀಮಿತವಾಗದ ಆರಾಧ್ಯ, ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿರುವ ತಾಯಿ ಸ್ಮಿತಾ ಅವರ ಮಾರ್ಗದರ್ಶನದಲ್ಲಿ ಆ ಹೂವುಗಳ ಸಾಮಾನ್ಯ ಹೆಸರು, ವೈಜ್ಞಾನಿಕ ಹಿನ್ನೆಲೆ (Scientific Name), ಪ್ರಬೇಧಗಳು ಹಾಗೂ ಅವುಗಳ ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ. ಕಂಪ್ಯೂಟರ್ ಹಾಗೂ ಗ್ರಾಫಿಕ್ ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಆರಾಧ್ಯ, ತಾನೇ ಸ್ವತಃ ಈ ಪುಸ್ತಕದ ಪುಟಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿರುವುದು ವಿಶೇಷ. ಪುಸ್ತಕದಲ್ಲಿ ಮೂಡಿಬಂದಿರುವ ಹೂವುಗಳ ಬಣ್ಣ ಮತ್ತು ಸೌಂದರ್ಯ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುವಂತಿದೆ.

ಮುಂದಿನ ಗುರಿ ‘ಭಾಗ-2’

ಸದ್ಯ ಲಭ್ಯವಾಗಿರುವ 21 ಸೂಕ್ಷ್ಮ ಹೂವುಗಳನ್ನು ಒಳಗೊಂಡ ಮೊದಲ ಪುಸ್ತಕ ಸಿದ್ಧವಾಗಿದೆ. “ಮುಂದೆ ಮಳೆಗಾಲ ಆರಂಭವಾದ ಬಳಿಕ ಕಾಡಿನಲ್ಲಿ ಇನ್ನಷ್ಟು ವಿಶಿಷ್ಟ ಬಗೆಯ ಹೂವುಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನೂ ಸೆರೆಹಿಡಿದು ವೈಜ್ಞಾನಿಕ ವಿವರಗಳೊಂದಿಗೆ ‘ಟೈನಿ ವೈಲ್ಡ್ ಫ್ಲವರ್ಸ್- ಭಾಗ 2’ ಪುಸ್ತಕವನ್ನು ಹೊರತರುವ ಆಲೋಚನೆ ಇದೆ” ಎನ್ನುತ್ತಾರೆ ಆರಾಧ್ಯ.

ಆರಾಧ್ಯಳಿಗೆ ಬಾಲ್ಯದಿಂದಲೇ ಪ್ರಕೃತಿ ಎಂದರೆ ಅಪಾರ ಪ್ರೀತಿ. ಈಕೆ 5ನೇ ತರಗತಿಯಲ್ಲಿದ್ದಾಗಲೇ ವಿವಿಧ ಕೀಟಗಳ (Insects) ಕುರಿತು ಹೀಗೆಯೇ ಅಧ್ಯಯನ ನಡೆಸಿದ್ದಳು ಎಂದು ಹೆತ್ತವರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಪೋಷಕರ ಪ್ರೋತ್ಸಾಹ ಹಾಗೂ ಬಾಲಕಿಯ ಪರಿಸರ ಪ್ರೇಮದ ಈ ಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Related Articles

Latest Articles