ನೆಲ್ಯಾಡಿ: ಸಾರ್ವಜನಿಕರ ಬಳಕೆಯಲ್ಲಿದ್ದ ರಸ್ತೆ ಏಕಏಕಿ ಬಂದ್: ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು

kadaba times

ನೆಲ್ಯಾಡಿ: ಸುಮಾರು 65 ವರ್ಷಗಳಿಂದ ಸಾರ್ವಜನಿಕರ ಬಳಕೆಯಲ್ಲಿದ್ದ ನೆಲ್ಯಾಡಿ ಗ್ರಾ.ಪಂ. ವ್ಯಾಪ್ತಿಯ ಬೆಥನಿ-ಪಡ್ಡಡ್ಕ ಜಿ.ಪಂ. ರಸ್ತೆಯ ಪಾಲೆತ್ತಡಿ ಎಂಬಲ್ಲಿ ವ್ಯಕ್ತಿಯೊಬ್ಬರು ಬೇಲಿ ಹಾಕಿ ರಸ್ತೆ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡ ರಸ್ತೆ ಬಳಕೆದಾರರು ಗ್ರಾ.ಪಂ. ಮತ್ತು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಜೂನ್ 3ರಂದು ನಡೆದಿದೆ. ತದನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿದಿದೆ.

kadaba times
uniq

65 ವರ್ಷಗಳ ಇತಿಹಾಸವಿರುವ ರಸ್ತೆ: ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಮುಂಭಾಗ ಹೈವೇಯಿಂದ ಪಡ್ಡಡ್ಕ – ಪಿಜಿನಡ್ಕ ಮೂಲಕ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ಈ ಜಿ.ಪಂ. ರಸ್ತೆಯು ದಶಕಗಳಿಂದ ಊರ್ಜಿತದಲ್ಲಿದೆ. ಸರಕಾರ ಹಾಗೂ ವಿವಿಧ ಪಂಚಾಯತ್ ಅನುದಾನಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವರ್ಷವೂ 550 ಮೀಟರ್ ಉದ್ದಕ್ಕೆ ಕಾಂಕ್ರೀಟೀಕರಣ ಮಾಡಲಾಗಿತ್ತು. ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ದಿನಾಲೂ ಬಳಸುವ ಈ ರಸ್ತೆಯನ್ನು, ಜಾಗದ ಮಾಲಕರು  “ಇದು ನನ್ನ ಪಟ್ಟಾ ಜಾಗ” ಎಂದು ಹೇಳಿ ಏಕಾಏಕಿ ಬೇಲಿ ಹಾಕಿ ಬಂದ್ ಮಾಡಿದ್ದರು. ಇದರಿಂದ ಸಂಚಾರಕ್ಕೆ ತೊಂದರೆ ಅನುಭವಿಸಿದ ಗ್ರಾಮಸ್ಥರು ಬೆಳಗ್ಗೆಯೇ ಪಂಚಾಯತ್ ಹಾಗೂ ಪೊಲೀಸ್ ಚೌಕಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ: ಗ್ರಾಮಸ್ಥರ ಒತ್ತಾಯದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುತೇಶ್ ಕೆ.ಪಿ., ನೆಲ್ಯಾಡಿ ಗ್ರಾ.ಪಂ. ಪಿಡಿಒ ಜಯರಾಜ್ ಮತ್ತು ಗ್ರಾಮ ಆಡಳಿತಾಧಿಕಾರಿ ಬಸವರಾಜು ಅವರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಾಗದ ಮಾಲಕರು “ರಸ್ತೆಯ ಇನ್ನೊಂದು ಬದಿಯಲ್ಲಿರುವ ಖಾಸಗಿ ಜಮೀನಿನವರು ನನ್ನ ಪಟ್ಟಾ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಒತ್ತುವರಿ ತೆರವುಗೊಂಡಲ್ಲಿ ನಾನು ರಸ್ತೆ ಬಳಕೆಗೆ ಜಾಗ ಬಿಟ್ಟುಕೊಡುತ್ತೇನೆ” ಎಂದು ಅಧಿಕಾರಿಗಳ ಮುಂದೆ ವಾದ ಮಂಡಿಸಿದರು.

ಜನಪ್ರತಿನಿಧಿಗಳ ಮಧ್ಯಸ್ಥಿಕೆ – ಸೌಹಾರ್ದಯುತ ಪರಿಹಾರ: ಸ್ಥಳ ಪರಿಶೀಲನೆ ಮುಗಿದ ಬಳಿಕವೂ ಸಂಜೆ ವೇಳೆ ಸಾರ್ವಜನಿಕರು ಮತ್ತೆ ಗ್ರಾ.ಪಂ. ಕಚೇರಿ ಮುಂದೆ ಜಮಾಯಿಸಿ ಬೇಲಿ ತೆರವುಗೊಳಿಸುವಂತೆ ಪಟ್ಟು ಹಿಡಿದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಹಿರಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಂಗಪ್ರವೇಶ ಮಾಡಿದರು.

kadaba times
kadaba times

ಜಿ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಭೂ ನ್ಯಾಯಮಂಡಳಿ ಸದಸ್ಯ ಅಬ್ರಹಾಂ ಪಿ.ಕೆ., ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಸದಸ್ಯ ಮೊಹಮ್ಮದ್ ಇಕ್ಬಾಲ್ ಹಾಗೂ ಪಿಡಿಒ ಜಯರಾಜ್ ಅವರು ಜಾಗದ ಮಾಲಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ನಕ್ಷೆಯ ಪ್ರಕಾರ ರಸ್ತೆಯು ಹಾದುಹೋಗುವ ಜಾಗವನ್ನು ಪಕ್ಕದ ಖಾಸಗಿ ಜಮೀನಿನವರು ಒತ್ತುವರಿ ಮಾಡಿಕೊಂಡಿರುವುದು ಮನವರಿಕೆಯಾಯಿತು. ಕಂದಾಯ ಇಲಾಖೆಯ ಸಹಯೋಗದೊಂದಿಗೆ ಈ ಒತ್ತುವರಿಯನ್ನು ತೆರವುಗೊಳಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಯಿತು. ಒತ್ತುವರಿ ತೆರವಾಗುತ್ತಿದ್ದಂತೆ ತನ್ನ ಖಾಸಗಿ ಜಾಗದಲ್ಲಿರುವ ತಡೆಬೇಲಿಯನ್ನು ತೆರವುಗೊಳಿಸಲು ಹಾಗೂ ಹೆಚ್ಚುವರಿ 5 ಅಡಿ ಅಗಲದ ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ವಿನೋಜ್ ಸಮ್ಮತಿಸಿದರು.

ಈ ಸೌಹಾರ್ದಯುತ ಒಪ್ಪಂದದೊಂದಿಗೆ ಸುದೀರ್ಘ ಸಮಯದಿಂದ ನಡೆದಿದ್ದ ರಸ್ತೆ ವಿವಾದಕ್ಕೆ ತಾತ್ಕಾಲಿಕ ಸುಖಾಂತ್ಯ ಸಿಕ್ಕಿದ್ದು, ರಾತ್ರಿ 7 ಗಂಟೆಯ ವೇಳೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.

Related Articles

Latest Articles