ಕಡಬದಲ್ಲಿ ನಿರಂತರ ವಿದ್ಯುತ್ ಕಡಿತ: ಗ್ರಾಹಕರ ಆಕ್ರೋಶ, ಪರಿಶೀಲನೆಗೆ ಮೆಸ್ಕಾಂ ಅಧೀಕ್ಷಕರ ಸೂಚನೆ

kadaba times

ಕಡಬ: ಕಡಬ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸತತವಾಗಿ ಉಂಟಾಗುತ್ತಿರುವ ವಿದ್ಯುತ್ ಕಡಿತ ಹಾಗೂ ವಿದ್ಯುತ್ ವ್ಯತ್ಯಯದ ಕುರಿತು ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 26ರಂದು ಕಡಬ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಸಮರ್ಪಕ ವಿದ್ಯುತ್ ಸರಬರಾಜು ಕಲ್ಪಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

kadaba times
uniq

ಸಭೆಯು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ (ಎಸ್.ಇ) ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಲವಾರು ತಿಂಗಳುಗಳಿಂದ ನಿರಂತರವಾಗಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದರೂ, ದೂರು ನೀಡಿದಾಗ ಯಾವುದೇ ಸಮಸ್ಯೆ ಇಲ್ಲ ಎಂಬ ಉಡಾಫೆಯ ಉತ್ತರ ಬರುತ್ತಿದೆ ಎಂದು ಗ್ರಾಹಕರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ತಾತ್ಕಾಲಿಕ ವ್ಯತ್ಯಯ: ಎಇಇ ಸಜಿ ಕುಮಾರ್ ಸ್ಪಷ್ಟನೆ: ಗ್ರಾಹಕರ ದೂರಿಗೆ ಪ್ರತಿಕ್ರಿಯಿಸಿದ ಕಡಬ ಮೆಸ್ಕಾಂ ಎಇಇ ಸಜಿ ಕುಮಾರ್ ಅವರು, “ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ 33 ಕೆವಿ ವಿದ್ಯುತ್ ಮಾರ್ಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದಾಗಿ ಕಡಬ ಉಪವಿಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ” ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರು, 33 ಕೆವಿ ವಿದ್ಯುತ್ ಮಾರ್ಗವನ್ನು ತಕ್ಷಣವೇ ಪರಿಶೀಲಿಸಿ, ಬದಲಿ ಪರ್ಯಾಯ ವ್ಯವಸ್ಥೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನ: ಮೆಸ್ಕಾಂ ಭರವಸೆ “ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅವಘಡಗಳು ಸಂಭವಿಸಿದ ತಕ್ಷಣ ಸಾರ್ವಜನಿಕರು ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಿದರೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾಗುವ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವನ್ನು ಖಾಸಗಿ ಗುತ್ತಿಗೆದಾರರ ಮೂಲಕ ಶೀಘ್ರವಾಗಿ ಮಾಡಿಸಲಾಗುತ್ತಿದೆ. ಲೈನ್ ಮ್ಯಾನ್ ಕೊರತೆಯನ್ನೂ ಶೀಘ್ರದಲ್ಲೇ ನಿವಾರಿಸಲಾಗುವುದು. ಎಲ್ಲ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ” ಎಂದು ಕೃಷ್ಣರಾಜ್ ತಿಳಿಸಿದರು.

ಸಭೆಯಲ್ಲಿ ಇಬ್ಬರ ನಡುವೆ ವಾಗ್ವಾದ: ಮೆಸ್ಕಾಂ ಅಧಿಕಾರಿಯೊಬ್ಬರಿಗೆ ಕಡಬ ವ್ಯಕ್ತಿಯೊಬ್ಬರು ಅಭಿನಂದನೆ ತಿಳಿಸಿ ಮಾತು ಮುಂದುವರಿಸಿದಕ್ಕೆ ಆಕ್ರೋಶಕೊಂಡ ಕೋಡಿಂಬಾಳದ ವ್ಯಕ್ತಿಯೊಬ್ಬರು ಅಸಮಧಾನ ಹೊರ ಹಾಕಿದರು. ಕೆಲ ಹೊತ್ತು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿದ್ದ ಅಧಿಕಾರಿಗಳು,ಗ್ರಾಹಕರು ಕೆಲ ಹೊತ್ತು ಮೂಕಪ್ರೇಕ್ಷಕರಾದರು.

ಸಭೆಯಲ್ಲಿ ಸಾರ್ವಜನಿಕರ ಪ್ರಮುಖ ಬೇಡಿಕೆಗಳು ಮತ್ತು ಮನವಿಗಳು:

kadaba times
kadaba times
  • ದಾಖಲೆ ಸಮಸ್ಯೆ ಮತ್ತು ವಿದ್ಯುತ್ ಸಂಪರ್ಕ: ಬೇಳೆಲೆ ಗ್ರಾಮದ ಗೋಪಾಳಿ ಭಾಗದ ಕೆಲ ನಿವಾಸಿಗಳು ತಮಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕ ಸಂಪರ್ಕ ನೀಡುವಂತೆ ಮನವಿ ಮಾಡಿದರು. ಗ್ರಾಪಂ ಎನ್‌ಒಸಿ ಇಲ್ಲದೆ ಕನೆಕ್ಷನ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

  • ಅಪಾಯಕಾರಿ ಮರಗಳ ತೆರವು: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಕಡಬ-ಆಲಂಕಾರು ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳು ವಿದ್ಯುತ್ ತಂತಿಗಳಿಗೆ ತೊಂದರೆ ಉಂಟುಮಾಡುತ್ತಿದ್ದು, ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಒತ್ತಾಯಿಸಿದರು. ಈಶ್ವರ ಗೌಡ ಹೊಸಮಠ ಅವರೂ ಸಹ ಹೊಸಮಠ ಸಿ.ಎ ಬ್ಯಾಂಕ್ ಹಿಂಭಾಗದ ಅಪಾಯಕಾರಿ ಮರಗಳ ತೆರವಿಗಾಗಿ ಮನವಿ ಮಾಡಿದರು.

  • ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಮತ್ತು ತಂತಿ ಬದಲಾವಣೆ: ಕೆ.ಎಂ. ಅಬ್ರಹಾಂ ಕವನಾಟಲ್ ಅವರು ಕೊಯ್ಲಡ್ಕ ಸಮೀಪದ ಅಪಾಯಕಾರಿ ತಂತಿಗಳನ್ನು ಬದಲಾಯಿಸಲು ಕೋರಿದರು. ಕುಮಾರ್ ಗೋಪಾಳಿr ಹಾಗೂ ಜಗದೀಶ್ ಕಲ್ಲಂತಡ್ಕ ಅವರು ತಮ್ಮ ಮನೆ ಬಳಿಯ ಹಳೆಯ ಕಂಬ ಹಾಗೂ ತಂತಿಗಳನ್ನು ಬದಲಾಯಿಸಲು ಒತ್ತಾಯಿಸಿದರು. ಬಲ್ಯ ಪ್ರದೇಶದ 63 ಕೆವಿ ವಿದ್ಯುತ್ ಪರಿವರ್ತಕ ಪದೇ ಪದೇ ಕೈಕೊಡುತ್ತಿದ್ದು, ಅದನ್ನು ತಕ್ಷಣ ಬದಲಾಯಿಸುವಂತೆ ಜಾನ್ಸನ್ ಆಗ್ರಹಿಸಿದರು.

  • 3 ಫೇಸ್ ಸಮಸ್ಯೆ ಹಾಗೂ ಸೂರ್ಯಘರ್ ಯೋಜನೆ: ಅನೀಶ್ ಕೋಡಿಂಬಾಳ ಅವರು ಕೋಡಿಂಬಾಳ ಭಾಗದಲ್ಲಿ 3 ಫೇಸ್ ವಿದ್ಯುತ್ ಸಮಸ್ಯೆ ನಿವಾರಣೆಗೆ ಹಾಗೂ ಸೂರ್ಯಘರ್ ಉಚಿತ ಸೌರ ವಿದ್ಯುತ್ ಯೋಜನೆಯ ಅನುಷ್ಠಾನದ ಕುರಿತು ಸೂಕ್ತ ಮಾಹಿತಿ ನೀಡುವಂತೆ ವಿನಂತಿಸಿದರು.

 ಸಭೆಯಲ್ಲಿ ಮೆಸ್ಕಾಂ ಸಹಾಯಕ ತಾಂತ್ರಿಕ ಇಂಜಿನಿಯರ್ ಅಣ್ಣಪ್ಪ, ಕಡಬ ಜೆಇ ಸತ್ಯನಾರಾಯಣ, ನೆಲ್ಯಾಡಿ ಶಾಖೆಯ ಜೆಇ ರಾಮಣ್ಣ, ಆಲಂಕಾರು ಶಾಖೆಯ ಜೆಇ ಪ್ರೇಮ್ ಕುಮಾರ್, ಬೇಳೆಲೆ ಶಾಖೆಯ ಜೆಇ ಮನೋಜ್ ಹಾಗೂ ಮೇಲ್ವಿಚಾರಕ ರಾಜನ್ ಕೆ.ಆರ್ ಉಪಸ್ಥಿತರಿದ್ದರು.

Related Articles

Latest Articles