ಮಧ್ಯರಾತ್ರಿ ತಡೆದು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ

kadaba times

ಕಡಬ/ಮಂಗಳೂರು:ಮಂಗಳೂರು ನಗರದ ಕೋಡಿಕಲ್‌ನಲ್ಲಿ ರಾತ್ರಿ ವೇಳೆ ಬೀಟ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಸಿಮೆಂಟ್ ಶೀಟ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಯತ್ನಗೈದು ಕೇರಳಕ್ಕೆ ಪರಾರಿಯಾಗಿದ್ದ ಕಡಬ ತಾಲೂಕಿನ ನೆಲ್ಯಾಡಿ ಹಾಗೂ ಬೆಳ್ತಂಗಡಿ ಮೂಲದ ಇಬ್ಬರು ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

kadaba times
uniq

ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ನೆಲ್ಯಾಡಿ (ಮಣ್ಣಗುಂಡಿ ಹೌಸ್) ನಿವಾಸಿ ಚಂದನ್ (24) ಮತ್ತು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ (ಹತ್ಯಡ್ಕ ಗ್ರಾಮ) ನಿವಾಸಿ ಸಚಿನ್ ಕೆ.ಆರ್ (24) ಎಂದು ಗುರುತಿಸಲಾಗಿದೆ.

ಮಧ್ಯರಾತ್ರಿ ತಡೆದು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ!

ಮೇ 24ರಂದು ಬೆಳಗಿನ ಜಾವ ಸುಮಾರು 02:10 ಗಂಟೆಯ ವೇಳೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಪೊಲೀಸ್ ಸಿಬ್ಬಂದಿ ರಾತ್ರಿ ಬೀಟ್ ಕರ್ತವ್ಯದಲ್ಲಿದ್ದರು. ಈ ವೇಳೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ ಮಧ್ಯರಾತ್ರಿ ಸುತ್ತಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ತಡೆದು ವಿಚಾರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಯುವಕರು, ಸ್ಕೂಟರ್ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ರಸ್ತೆಯಲ್ಲಿದ್ದ ಸಿಮೆಂಟ್ ಶೀಟ್‌ನ ತುಂಡಿನಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಜೋರಾಗಿ ಹೊಡೆದಿದ್ದಾನೆ.

ಹಲ್ಲೆಯ ತೀವ್ರತೆಗೆ ಪೊಲೀಸ್ ಸಿಬ್ಬಂದಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಕುರಿತು ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

kadaba times
kadaba times
ಕೇರಳದ ಕಾಂಞಿಗಾಡ್‌ನಲ್ಲಿ ಸಿಸಿಬಿ ಜಾಲಕ್ಕೆ ಬಿದ್ದ ಆರೋಪಿಗಳು:

ಕೃತ್ಯ ಎಸಗಿದ ತಕ್ಷಣ ಆರೋಪಿಗಳು ಮಂಗಳೂರಿನಿಂದ ಕಾಲ್ಕಿತ್ತು ಕೇರಳಕ್ಕೆ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಸಿಸಿಬಿ ಪೊಲೀಸರು, ತನಿಖೆ ನಡೆಸಿ ದೊರೆತ ಖಚಿತ ಮಾಹಿತಿ ಮತ್ತು ಸಾಕ್ಷ್ಯಾಧಾರಗಳ ಮೇರೆಗೆ ಮೇ 26ರಂದು ಕೇರಳ ರಾಜ್ಯದ ಕಾಂಞಿಗಾಡ್ ಪ್ರದೇಶದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕರು:

ಬಂಧಿತ ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು. ಕಡಬ ತಾಲೂಕಿನ ನೆಲ್ಯಾಡಿಯ ಚಂದನ್ ಕೂಳೂರಿನ ‘ಅದ್ವೈತ್ ಕಿಯಾ’ ಶೋರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಆರೋಪಿ ಸಚಿನ್ ಕೆ.ಆರ್ ಕುಂಟಿಕಾನದ ‘ಪಾನ್ ಪಾನ್ ಸ್ವೀಟ್ಸ್’ (PON PON Sweets) ಫ್ಯಾಕ್ಟರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

Related Articles

Latest Articles