
ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ನದಿಗೆ ಸ್ನಾನಕ್ಕೆ ತೆರಳಿದ್ದ ವೃದ್ಧರೊಬ್ಬರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಸಂಜೆ ಸಂಭವಿಸಿದೆ.


ಮೃತರನ್ನು ಕೊಣಾಜೆ ಗ್ರಾಮದ ಸುಬ್ರಮಣ್ಯ (70) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದು ವರ್ಷದಿಂದ ಕಡಬದ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಘಟನೆಯ ವಿವರ: ಮೇ 24ರಂದು ಸಂಜೆ ಎಂದಿನಂತೆ ತಮ್ಮ ಹೋಟೆಲ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಸುಬ್ರಮಣ್ಯ ಅವರು, ಪ್ರತಿದಿನದ ತಮ್ಮ ಅಭ್ಯಾಸದಂತೆ ಸಂಜೆ ಸುಮಾರು 5.45ರ ವೇಳೆಗೆ ಮನೆಯ ಸಮೀಪದ ನದಿಗೆ ಸ್ನಾನ ಮಾಡಲು ತೆರಳಿದ್ದರು. ಆದರೆ, ಸಾಕಷ್ಟು ಸಮಯ ಕಳೆದರೂ ಅವರು ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪತ್ನಿ ಪರಮೇಶ್ವರಿ ಅವರು, ತಕ್ಷಣವೇ ಮಗ ಧರ್ಮರಾಜ್ ಅವರಿಗೆ ನದಿಯ ಕಡೆಗೆ ಹೋಗಿ ಹುಡುಕುವಂತೆ ತಿಳಿಸಿದ್ದಾರೆ.
ತಾಯಿಯ ಸೂಚನೆಯಂತೆ ಧರ್ಮರಾಜ್ ಅವರು ನದಿಯ ಬಳಿ ತೆರಳಿ ನೋಡಿದಾಗ, ಸುಬ್ರಮಣ್ಯ ಅವರು ನೀರಿನಲ್ಲಿ ಮುಳುಗಿ ಉಸಿರುಗಟ್ಟುವ ಸ್ಥಿತಿಯಲ್ಲಿ ಕೈಕಾಲು ಬಡಿದಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಧರ್ಮರಾಜ್ ಅವರು ತಮ್ಮ ಸ್ನೇಹಿತರು ಮತ್ತು ಸ್ಥಳೀಯರ ಸಹಾಯದಿಂದ ಸುಬ್ರಮಣ್ಯ ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.


ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.
ಮೃತರ ಸಾವಿನಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಪತ್ನಿ ಪರಮೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
