
ಕಡಬ/ಕುಕ್ಕೆ ಸುಬ್ರಹ್ಮಣ್ಯ: ಶೋಡೋಕಾನ್ ಸ್ಕೂಲ್ ಆಫ್ ಕರಾಟೆ ಇಂಡಿಯಾ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ರಾಮಕೃಷ್ಣ (ಕಿಶನ್) ಪಂಜಳ ಕೋಡಿಂಬಾಳ ಅವರಿಗೆ ಕರಾಟೆಯಲ್ಲಿ ಅತ್ಯುನ್ನತ ‘ಪೋರ್ತ್ಡನ್ ಬ್ಲ್ಯಾಕ್ ಬೆಲ್ಟ್’ ಲಭಿಸಿದೆ.


ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಭವ್ಯ ಸಮಾರಂಭದಲ್ಲಿ ಇವರಿಗೆ 4ನೇ ಬ್ಲ್ಯಾಕ್ ಬೆಲ್ಟ್, ಅಧಿಕೃತ ಪ್ರಮಾಣಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
ಕೋಡಿಂಬಾಳ ಮೂಲದ ಸಾಧಕ: ಮೂಲತಃ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದವರಾದ ರಾಮಕೃಷ್ಣ ಅವರು ಕೆ.ಪಿ. ನಾರಾಯಣ ಮತ್ತು ಕಸ್ತೂರಿ ನಾರಾಯಣ್ ದಂಪತಿಯ ಪುತ್ರರಾಗಿದ್ದಾರೆ. ಇವರು ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೇ ಪೂರೈಸಿದ್ದರು. ಎಳೆಯ ಪ್ರಾಯದಲ್ಲೇ ಕರಾಟೆ ಸಮರ ಕಲೆಯತ್ತ ತೀವ್ರ ಆಸಕ್ತಿ ತಳೆದಿದ್ದ ಇವರು, ಕಳೆದ 25 ವರ್ಷಗಳಿಂದ ಮೈಸೂರಿನ ಪ್ರಖ್ಯಾತ ಕರಾಟೆ ಗುರು ಯೋಗೀಶ್ ಮೈಸೂರು ಅವರಿಂದ ಕಠಿಣ ಕರಾಟೆ ಅಭ್ಯಾಸ ಮಾಡಿದ್ದರು. ಈ ಹಿಂದೆ ಮೂರು ಬ್ಲ್ಯಾಕ್ ಬೆಲ್ಟ್ ಪಡೆದು ಸಾಧನೆ ಮೆರೆದಿದ್ದ ಇವರು, ಇದೀಗ 4ನೇ ಬ್ಲ್ಯಾಕ್ ಬೆಲ್ಟ್ (ಫೋರ್ತ್ ಡನ್) ಮುಡಿಗೇರಿಸಿಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ.


ಸ್ಥಳೀಯವಾಗಿ ತರಬೇತಿ ಕೇಂದ್ರದ ಆಲೋಚನೆ: ಹಿಂದೆ ಮೈಸೂರಿನಲ್ಲಿ ಕರಾಟೆ ಶಿಕ್ಷಕರಾಗಿ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ರಾಮಕೃಷ್ಣ ಅವರು, ಪ್ರಸ್ತುತ ಸುಬ್ರಹ್ಮಣ್ಯದ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಆಸಕ್ತ ಪ್ರತಿಭೆಗಳಿಗೆ ಹಾಗೂ ಮಕ್ಕಳಿಗೆ ಕರಾಟೆ ಸಮರ ಕಲೆಯನ್ನು ಪರಿಚಯಿಸಿ, ಆತ್ಮರಕ್ಷಣೆಯ ತರಬೇತಿ ನೀಡುವ ಉದಾತ್ತ ಉದ್ದೇಶದಿಂದ, ಶೀಘ್ರದಲ್ಲೇ ಕಡಬ ಮತ್ತು ಸುಬ್ರಹ್ಮಣ್ಯ ಭಾಗದಲ್ಲಿ ನೂತನ ಕರಾಟೆ ತರಬೇತಿ ಕೇಂದ್ರವನ್ನು ಆರಂಭಿಸುವ ಆಲೋಚನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಪಂಜಳ ಅವರ ಈ ಮಹೋನ್ನತ ಸಾಧನೆಗೆ ಕಡಬ ಮತ್ತು ಸುಬ್ರಹ್ಮಣ್ಯ ಭಾಗದ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ಹಾಗೂ ಅಭಿನಂದನೆಗಳು ಹರಿದುಬರುತ್ತಿವೆ.
