
ವಿಧಿಯ ಆಟ ಅತ್ಯಂತ ಕ್ರೂರವಾದದ್ದು ಎಂಬುದಕ್ಕೆ ಮಡಿಕೇರಿಯಲ್ಲಿ ಸಂಭವಿಸಿದ ಈ ಘಟನೆಯೇ ಸಾಕ್ಷಿ. ಇಡೀ ಮನೆಯ ಜವಾಬ್ದಾರಿ ಹೊತ್ತು, ಹೆಂಡತಿ-ಮಕ್ಕಳ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ ಯುವಕನೊಬ್ಬ ಮರ ಕಡಿಯುವಾಗ ನಡೆದ ಭೀಕರ ಅವಘಡಕ್ಕೆ ಬಲಿಯಾಗಿದ್ದಾನೆ.


ಮಡಿಕೇರಿಯ ಪೆನ್ಶನ್ ಲೈನ್ ರಸ್ತೆಯ ಸೋಮಶೇಖರ್ ಎಂಬವರ ಮನೆ ಬಳಿ ಮರ ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೊಂಬೆ ತಲೆಗೆ ಬಡಿದು ಸುಳ್ಯದ ತೊಡಿಕಾನ ಗ್ರಾಮದ ಚಾಂಬಾಡು ನಿವಾಸಿ ಕಿರಣ್ (26) ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ. ಈ ಸಾವು ಕೇವಲ ಒಂದು ಜೀವವನ್ನು ಬಲಿ ಪಡೆದಿಲ್ಲ, ಬದಲಿಗೆ ಎರಡು ಹಸುಗೂಸುಗಳು ಹಾಗೂ ಯುವ ಪತ್ನಿಯ ಬದುಕನ್ನು ಕತ್ತಲಿಗೆ ತಳ್ಳಿದೆ.
ಎರಡು ತಿಂಗಳ ಹಿಂದೆಯಷ್ಟೇ ನಡೆದಿತ್ತು ಮಗನ ನಾಮಕರಣ!
ಮೃತ ಕಿರಣ್ ಕಡಬದ ಕೋಡಿಂಬಾಳ ಗ್ರಾಮದ ದಾಸರಗುಡ್ಡೆಯ ದೀಪಿಕಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ತಂಗಿಗೆ ಆಟವಾಡಲು ತಮ್ಮ ಬಂದನೆಂದು ಇಡೀ ಕುಟುಂಬ ಸಡಗರಪಟ್ಟಿತ್ತು. ಇನ್ನು ಎರಡು ತಿಂಗಳ ಹಿಂದೆಯಷ್ಟೇ ಈ ದಂಪತಿ ತಮ್ಮ ಎರಡನೇ ಗಂಡು ಮಗುವಿನ ನಾಮಕರಣ ಶಾಸ್ತ್ರವನ್ನು ಅತ್ಯಂತ ಸಂಭ್ರಮದಿಂದ ನೆರವೇರಿಸಿದ್ದರು. ಹಸುಗೂಸಿನ ಮುಖ ನೋಡಿ ಸಂಭ್ರಮಿಸುತ್ತಿದ್ದ ಸಣ್ಣದೊಂದು ಸುಂದರ ಸಂಸಾರದ ಖುಷಿ ಎರಡು ತಿಂಗಳು ಕೂಡ ಉಳಿಯಲಿಲ್ಲ. ವಿಧಿ ಆ ಮಗುವಿಗೆ ತಂದೆಯ ಪ್ರೀತಿಯನ್ನು ದಕ್ಕದಂತೆ ಮಾಡಿದ್ದಾನೆ. ಹೆಣ್ಣು ಮಗು ಮತ್ತು ಗಂಡು ಮಗುವಿನೊಂದಿಗೆ ನಗುನಗುತ್ತಾ ಬಾಳಬೇಕಾಗಿದ್ದ ತಾಯಿ ದೀಪಿಕಾ ಇಂದು ಮಕ್ಕಳನ್ನು ಅಪ್ಪಿ ಕಣ್ಣೀರು ಹಾಕುತ್ತಿರುವುದು ನೆರೆಹೊರೆಯವರ ಕರುಳು ಹಿಂಡುವಂತಿದೆ.
ಬೆಳಗ್ಗೆ ಹೋದವರು ಸಂಜೆ ಹೆಣವಾಗಿ ಬಂದರು…
ಮರ ಕಡಿಯುವ ಕಾಯಕದಲ್ಲಿ ತರಬೇತಿ ಪಡೆದು ಅತ್ಯಂತ ನಿಪುಣರಾಗಿದ್ದ ಕಿರಣ್, ಎಂದಿನಂತೆ ಮೇ 18ರ ಸೋಮವಾರ ಬೆಳಗ್ಗೆ 7:30ಕ್ಕೆ ಪತ್ನಿ ಬಳಿ “ಮಡಿಕೇರಿಯಲ್ಲಿ ಮರ ಕಟಾವು ಕೆಲಸವಿದೆ” ಎಂದು ಹೇಳಿ ವಿನಯ್ ಕುಮಾರ್ ಎಂಬವರ ಜೊತೆ ಮನೆಯಿಂದ ಹೊರಟಿದ್ದರು. ಆದರೆ ವಿಧಿ ಬೇರೆಯದೇ ಆಟ ಆಡಿದ್ದ. ಸಂಜೆ 5:30ರ ಸುಮಾರಿಗೆ ಮರದ ಕೊಂಬೆಯೊಂದು ತಲೆಗೆ ಬಲವಾಗಿ ಹೊಡೆದ ಪರಿಣಾಮ ಕಿರಣ್ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಸಾಮಾನ್ಯವಾಗಿ ತಮ್ಮದೇ ಆದ ನುರಿತ ತಂಡದೊಂದಿಗೆ ಕೆಲಸಕ್ಕೆ ಹೋಗುತ್ತಿದ್ದ ಕಿರಣ್, ಈ ಬಾರಿ ಇವರೊಬ್ಬರೇ ಬೇರೆ ವ್ಯಕ್ತಿಗಳೊಂದಿಗೆ ಕೆಲಸಕ್ಕೆ ಹೋಗಿದ್ದರೆನ್ನಲಾಗಿದೆ.


ನಿರ್ಲಕ್ಷ್ಯವೇ ತಂದೊಡ್ಡಿದ ದುರಂತ: ಇಬ್ಬರ ವಿರುದ್ಧ ಕೇಸ್
ಯಾವುದೇ ಸುರಕ್ಷತಾ ಸಾಧನಗಳನ್ನು (Safety Gears) ನೀಡದೇ ಕಿರಣ್ ಅವರನ್ನು ಮರಕ್ಕೆ ಹತ್ತಿಸಿರುವುದೇ ಈ ಸಾವಿಗೆ ನೇರ ಕಾರಣ ಎಂದು ಮೃತರ ಪತ್ನಿ ದೀಪಿಕಾ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲಸದ ಮೇಲ್ವಿಚಾರಣೆ ವಹಿಸಿದ್ದ ವಿನಯ್ ಕುಮಾರ್ ಮತ್ತು ಮನೆಯ ಮಾಲೀಕ ಸೋಮಶೇಖರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದುಡಿದು ಸಾಕಬೇಕಾಗಿದ್ದ ಪತಿ, ಹೆಣ್ಣು ಮಗು ಹಾಗೂ ಕೇವಲ ಎರಡು ತಿಂಗಳ ಹಿಂದೆಯಷ್ಟೇ ನಾಮಕರಣ ಕಂಡ ಹಸುಗೂಸನ್ನು ಅನಾಥ ಮಾಡಿ ಹೋಗಿರುವುದನ್ನು ಅರಗಿಸಿಕೊಳ್ಳಲು ಕುಟುಂಬಸ್ಥರಿಗೆ ಸಾಧ್ಯವಾಗುತ್ತಿಲ್ಲ. ತೊಡಿಕಾನ ಗ್ರಾಮದ ಚಾಂಬಾಡು ನಿವಾಸಿಗಳಾದ ಐತಪ್ಪ ಮತ್ತು ಸೀತಾಲಕ್ಷ್ಮೀ ದಂಪತಿಯ ಪುತ್ರ ಕಿರಣ್ ಅವರ ಅಕಾಲಿಕ ನಿಧನಕ್ಕೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.
