ಶಿರಾಡಿ ಡಬಲ್ ಮರ್ಡರ್ ಹಿಸ್ಟರಿ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ

ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಈತನಿಗೆ 5 ವರ್ಷ ಜೈಲು ಶಿಕ್ಷೆ

kadaba times

ನೆಲ್ಯಾಡಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ 100 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದ ಪ್ರಮುಖ ಅಪರಾಧಿ ಜಯೇಶ್ ಪೂಜಾರಿಗೆ ನಾಗ್ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಜೈಲು ಶಿಕ್ಷೆ ಪ್ರಕಟಿಸಿದೆ.

kadaba times
uniq

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಗ್ರಾಮದ ನಿವಾಸಿಯಾಗಿರುವ ಜಯೇಶ್ ಪೂಜಾರಿ, ಈ ಹಿಂದೆ ತಾಯಿ-ಮಗುವಿನ ದಾರುಣ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಜೈಲಿನಿಂದಲೇ ಸಚಿವರಿಗೆ ಬೆದರಿಕೆ ಕರೆ!

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್ ಪೂಜಾರಿ, 2023ರ ಮಾರ್ಚ್ 21 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ಸೇರಿ ಒಟ್ಟು ಮೂರು ಬಾರಿ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿದ್ದ. ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನವನೆಂದು ಪರಿಚಯಿಸಿಕೊಂಡು, 100 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಕಚೇರಿಯನ್ನು ಬಾಂಬ್ ಹಾಕಿ ಸ್ಫೋಟಿಸುವುದಾಗಿ ಮತ್ತು ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಈ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಚಿವರ ನಿವಾಸ ಹಾಗೂ ಕಚೇರಿಗೆ ಬಿಗಿ ಭದ್ರತೆ ಒದಗಿಸಿದ್ದರು. ವಿಷಯದ ಗಾಂಭೀರ್ಯತೆಯನ್ನು ಅರಿತು ರಾಷ್ಟ್ರೀಯ ತನಿಖಾ ದಳ (NIA) ಕೂಡ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು.

ಜೈಲಿನಲ್ಲಿ ಸಿಕ್ಕಿಬಿದ್ದ ಮೊಬೈಲ್ ಮತ್ತು ರಹಸ್ಯ ಡೈರಿ

ತನಿಖೆಯ ಭಾಗವಾಗಿ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಭೇಟಿ ನೀಡಿ ಜಯೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆತನಿಂದ ಒಂದು ಮೊಬೈಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಆತನ ಬಳಿಯಿದ್ದ ಡೈರಿಯಲ್ಲಿ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಯ ರಹಸ್ಯ ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದವು. ಈ ಸಂಖ್ಯೆಗಳನ್ನು ಆತನ ಸ್ನೇಹಿತೆಯೊಬ್ಬಳು ನೀಡಿದ್ದಾಳೆ ಎನ್ನಲಾಗಿದೆ.

ವಿಚಾರಣೆ ವೇಳೆ ತಾನು ಬೆಂಗಳೂರಿನಲ್ಲಿರುವ ನಾಲ್ವರು ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಜಯೇಶ್ ತಪ್ಪೊಪ್ಪಿಕೊಂಡಿದ್ದರಿಂದ, ಎನ್‌ಐಎ ಆ ನಾಲ್ವರ ವಿರುದ್ಧವೂ ತನಿಖೆ ಚುರುಕುಗೊಳಿಸಿದೆ. ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

kadaba times
kadaba times
ಶಿರಾಡಿ ಡಬಲ್ ಮರ್ಡರ್ ಹಿಸ್ಟರಿ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಯೇಶ್!

ಜಯೇಶ್ ಪೂಜಾರಿ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ನ ಅಪರಾಧ ಇತಿಹಾಸ ಅತ್ಯಂತ ಭಯಾನಕವಾಗಿದೆ. 2008ರ ಆಗಸ್ಟ್ 2 ರಂದು ಶಿರಾಡಿಯ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್ ಅವರ ಪತ್ನಿ ಸೌಮ್ಯ (23) ಮತ್ತು ಅವರ 3 ವರ್ಷದ ಗಂಡು ಮಗು ಜಿಷ್ಣುವನ್ನು ಚಿನ್ನಾಭರಣಕ್ಕಾಗಿ ಕುತ್ತಿಗೆ ಸೀಳಿ ಕ್ರೂರವಾಗಿ ಕೊಲೆ ಮಾಡಿದ್ದ. ಈ ದಾರುಣ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 2016ರ ಆಗಸ್ಟ್ 12 ರಂದು ಜಯೇಶ್‌ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ತೆಂಗಿನ ಮರ ಹತ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕುಖ್ಯಾತ ಕಿಲ್ಲರ್!

2008ರ ಕೊಲೆ ಕೃತ್ಯದ ಬಳಿಕ ಜಯೇಶ್ 4 ವರ್ಷಗಳ ಕಾಲ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. 2012ರಲ್ಲಿ ಕೇರಳದ ಅಲಪುರಂನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಆಕ್ರೋಶದಿಂದ ತೆಂಗಿನ ಮರ ಹತ್ತಿ ಕುಳಿತಿದ್ದ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಕೆಳಗಿಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಈತ ಕರ್ನಾಟಕದ ಮೋಸ್ಟ್ ವಾಂಟೆಡ್ ಕಿಲ್ಲರ್ ಎಂಬುದು ಪತ್ತೆಯಾಗಿತ್ತು.

ನಂತರ ಪುತ್ತೂರು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಮಂಗಳೂರು ಜೈಲಿನಲ್ಲಿದ್ದಾಗ ಒಮ್ಮೆ ಪುತ್ತೂರು ಕೋರ್ಟ್‌ನ ಕಟಕಟೆಯಿಂದಲೇ ಜಿಗಿದು ಸಾರ್ವಜನಿಕ ರಸ್ತೆಯಲ್ಲಿ ಓಡಿ ಪರಾರಿಯಾಗಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ ಸಾಹಸವನ್ನೂ ಈತ ಮಾಡಿದ್ದ.

ಇದೀಗ ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರ ನ್ಯಾಯಾಲಯ ಜಯೇಶ್‌ಗೆ ಮತ್ತೊಂದು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Related Articles

Latest Articles