ಆಲಂಕಾರಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ಯೋಜನೆ ವಿಳಂಬ

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ

kadaba times

ಕಡಬ: ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರ (ಡೇ ಕೇರ್ ಸೆಂಟರ್) ನಿರ್ಮಾಣವಾಗಿ ಉದ್ಘಾಟನೆಗೆ ಸಜ್ಜುಗೊಂಡ ಬೆನ್ನಲ್ಲೇ, ಕಡಬ ತಾಲೂಕಿನ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ತಕ್ಷಣವೇ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂಬ ಕೂಗು ಬಲವಾಗಿದೆ.

kadaba times
uniq

ಕೊಕ್ಕಡದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ವತಿಯಿಂದ ಸುಮಾರು ₹83 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ. ಆದರೆ, ಕಳೆದ 15 ವರ್ಷಗಳಿಂದ ಆಲಂಕಾರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದಿಗೂ ನೆನೆಗುದಿಗೆ ಬಿದ್ದಿದೆ.

ಆಶ್ವಾಸನೆಯಾಗಿಯೇ ಉಳಿದ ಭರವಸೆಗಳು

ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮೂರು ಜಿಲ್ಲೆಗಳಿಗೆ ಒಂದೊಂದರಂತೆ ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿತ್ತು. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಕೂಡ ಪಟ್ಟಿಯಲ್ಲಿತ್ತು. ಇದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಆಲಂಕಾರಿನಲ್ಲಿ ಕೇಂದ್ರದ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಮೀಸಲಿಡಲಾಗಿತ್ತು.

ಯು.ಟಿ. ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರ್ಷದೊಳಗೆ ಪುನರ್ವಸತಿ ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದರು. ತದನಂತರ ಆರೋಗ್ಯ ಇಲಾಖೆ ಆಯುಕ್ತ ಎ.ಬಿ. ಪಾಟೀಲ್ ಅವರು ಭೇಟಿ ನೀಡಿ, ಆಲಂಕಾರನ್ನು ಕೇಂದ್ರವಾಗಿಸಿಕೊಂಡು ದ.ಕ. ಜಿಲ್ಲೆಗೆ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಲಾಗುವುದು ಎಂದಿದ್ದರು. ಆದರೆ, ಈ ಯಾವುದೇ ಭರವಸೆಗಳು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

kadaba times
kadaba times

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. 2023ರಲ್ಲಿ 119 ಹಾಗೂ 2024ರಲ್ಲಿ 128 ಹೊಸ ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ತಪಾಸಣೆಯಲ್ಲಿ ಬೆಳ್ತಂಗಡಿಯಲ್ಲಿ 49 ಹಾಗೂ ಪುತ್ತೂರಿನಲ್ಲಿ 23 ಹೊಸ ಪ್ರಕರಣಗಳು ಕಂಡುಬಂದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ 543 ಹೊಸ ಪ್ರಕರಣಗಳು ದಾಖಲಾಗಿವೆ.

ಪ್ರಸ್ತುತ ಕೊಕ್ಕಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಡೋ ಪಾಲನಾ ಕೇಂದ್ರದ ಸಂತ್ರಸ್ತರನ್ನು ಶೀಘ್ರದಲ್ಲೇ ಆಲಂಕಾರಿನಲ್ಲಿ ನಿರ್ಮಾಣವಾಗಬೇಕಿರುವ ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಬೇಕು ಮತ್ತು ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Latest Articles