
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (KSRP) ಹೆಡ್ಕಾನ್ಸ್ಟೇಬಲ್ರೊಬ್ಬರ ಮನೆಯಲ್ಲೇ ಕಳ್ಳರು ಅಪ್ರತಿಮ ಧೈರ್ಯ ಪ್ರದರ್ಶಿಸಿ, ಸುಮಾರು 15.80 ಲಕ್ಷ ರೂಪಾಯಿ ಮೌಲ್ಯದ ನಗ-ನಗದನ್ನು ಕದ್ದೊಯ್ದಿರುವ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಕೋಡಿ ಎಂಬಲ್ಲಿ ನಡೆದಿದೆ. ಮೇ 15ರ ಶುಕ್ರವಾರ ಬೆಳಗ್ಗೆ ಈ ಭಾರಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.


ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಗುಪ್ತವಾರ್ತೆ ಸಂಗ್ರಹ (Intelligence) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರುಣಾಕರ ಗೌಡ ಪದ್ಮುಂಜ ಅವರ ಮನೆಯಲ್ಲೇ ಈ ದುಷ್ಕೃತ್ಯ ನಡೆದಿದೆ. ಪದ್ಮುಂಜದ ಗಾಡಕೋಡಿಯಲ್ಲಿರುವ ತಮ್ಮ ಮೂಲ ಮನೆಯಲ್ಲಿ ಸದ್ಯ ಒಂಟಿಯಾಗಿದ್ದರು. ಅವರ ಪತ್ನಿ ಉದ್ಯೋಗದ ನಿಮಿತ್ತ ಬೇರೆ ಊರಿನಲ್ಲಿದ್ದು, ಮಕ್ಕಳು ಕೂಡ ಪತ್ನಿಯ ಜೊತೆಯಲ್ಲೇ ವಾಸವಾಗಿದ್ದಾರೆ ಎನ್ನಲಾಗಿದೆ.
ಐಪಿಎಲ್ ಪಂದ್ಯ ವೀಕ್ಷಿಸಿ ಮಲಗಿದ್ದಾಗಲೇ ಸ್ಕೆಚ್! ಕೆಲ ದಿನಗಳ ಹಿಂದೆ ಕರುಣಾಕರ ಗೌಡ ಅವರ ಪತ್ನಿ ತನ್ನ ಕೊಠಡಿಯ ಕಪಾಟಿನಲ್ಲಿ ಚಿನ್ನಾಭರಣಗಳನ್ನು ಸುರಕ್ಷಿತವಾಗಿರಿಸಿ, ಅದಕ್ಕೆ ಬೀಗ ಹಾಕಿ ಬೀಗದ ಕೀಯನ್ನು ತಮ್ಮೊಂದಿಗೇ ಕೊಂಡೊಯ್ದಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ಕರುಣಾಕರ ಗೌಡ ಅವರು ತಡರಾತ್ರಿಯವರೆಗೆ ಐಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿ ಬಳಿಕ ಮಲಗಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಕಳ್ಳರು ತಡರಾತ್ರಿ ಮನೆಗೆ ನುಗ್ಗಿದ್ದಾರೆ. ಕರುಣಾಕರ ಗೌಡ ಅವರು ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲೇ ಪತ್ನಿಯ ಕೋಣೆಯ ಬೀಗ ಒಡೆದು ಕಳ್ಳತನ ಎಸಗಿದ್ದಾರೆ.
15.80 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳವು: ಶುಕ್ರವಾರ ಬೆಳಗ್ಗೆ ಕರುಣಾಕರ ಗೌಡ ಅವರು ಎದ್ದಾಗ ಪತ್ನಿಯ ಕೋಣೆಯ ಬೀಗ ಮುರಿದಿರುವುದು ಕಂಡುಬಂದು ಆತಂಕಗೊಂಡಿದ್ದಾರೆ. ತಕ್ಷಣ ಕೊಠಡಿಯ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟಿನ ಬೀಗವನ್ನು ಕೂಡ ಮುರಿದು ಹಾಕಿರುವುದು ಪತ್ತೆಯಾಗಿದೆ. ಕಪಾಟಿನೊಳಗಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ ಹನ್ನೆರಡುವರೆ ಪವನ್ ತೂಕದ ಚಿನ್ನಾಭರಣಗಳು, 80 ಸಾವಿರ ರೂ. ಮೌಲ್ಯದ ವಜ್ರದ ಆಭರಣ ಹಾಗೂ ಅಂದಾಜು 1 ಲಕ್ಷ ರೂ. ನಗದು ಹಣ ಸೇರಿದಂತೆ ಒಟ್ಟು 15.80 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.


ಖುದ್ದಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆಯಲ್ಲೇ, ಅವರ ಸಮ್ಮುಖದಲ್ಲೇ ಬೀಗ ಮುರಿದು ಈ ಪರಿ ಕಳ್ಳತನ ನಡೆಸಿರುವುದು ಇಡೀ ತಾಲೂಕಿನಲ್ಲಿ ಭಾರಿ ಆಶ್ಚರ್ಯ ಹಾಗೂ ಜನರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ತನಿಖೆ ಚುರುಕು: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮಹತ್ವದ ಸುಳಿವುಗಳನ್ನು ಕಲೆಹಾಕಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಹಾಗೂ ಠಾಣಾಧಿಕಾರಿ ಕೌಶಿಕ್ ಬಿ.ಸಿ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
