
ಮಂಗಳೂರು: ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಇಲ್ಲಿನ ನಿವಾಸಿಯಾದ ಕರಿಯಮ್ಮ (21) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.


ಕಳೆದ ನಾಲ್ಕು ತಿಂಗಳಿನಿಂದ ಕರಿಯಮ್ಮ ಅವರು ನಗರದಲ್ಲಿ ತನ್ನ ಹೆತ್ತವರೊಂದಿಗೆ ವಾಸವಾಗಿದ್ದರು. ಇವರು ಮಂಗಳೂರಿನ ಮಲ್ಲಿಕಟ್ಟೆ ಎಂಬಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮೇ 11ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದ ಕರಿಯಮ್ಮ, ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ.
ಯುವತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪೋಷಕರು ಹೋಟೆಲ್‌ಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ, “ಮೇ 11ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಲೆನೋವು ಬರುತ್ತಿದೆ ಎಂದು ಹೇಳಿ ಕರಿಯಮ್ಮ ಹೋಟೆಲ್‌ನಿಂದ ತೆರಳಿದ್ದಾರೆ” ಎಂಬ ಮಾಹಿತಿ ಲಭ್ಯವಾಗಿದೆ.


ಪೋಷಕರು ಹಾಗೂ ಸಂಬಂಧಿಕರು ಕರಿಯಮ್ಮ ಅವರಿಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕರಿಯಮ್ಮ ಅವರ ಪೋಷಕರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಯುವತಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
