
ಕ್ಯಾಂಟೀನ್ನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ ಹಾಗೂ ಉಸ್ಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ: ಪಟ್ಟಣದ ಕೆಇಬಿ ರಸ್ತೆಯಲ್ಲಿರುವ ಕ್ಯಾಂಟೀನ್ ಒಂದರಲ್ಲಿ ಗುಟ್ಟಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯನ್ನು ಭೇದಿಸಿರುವ ಬೆಳ್ತಂಗಡಿ ಪೊಲೀಸರು, ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಬೆಳ್ತಂಗಡಿ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ ‘ಪವನ್’ ಹೆಸರಿನ ಕ್ಯಾಂಟೀನ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಕ್ಯಾಂಟೀನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ ಎಂಬವರು ತನ್ನ ಪರಿಚಯದ ಉಸ್ಮಾನ್ ಎಂಬವರ ಜೊತೆ ಸೇರಿಕೊಂಡು, ಅಕ್ರಮ ಲಾಭದ ಉದ್ದೇಶದಿಂದ ಕ್ಯಾಂಟೀನ್ನ ಒಳಗಿನ ಕೋಣೆಯಲ್ಲಿ ಹೆಂಗಸರು/ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.


ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ (ತನಿಖೆ) ಸಿಕಂದರ್ ಪಾಷಾ ಅವರಿಗೆ ಲಭಿಸಿದ ಮಾಹಿತಿಯ ಮೇರೆಗೆ, ಪ್ರಾಥಮಿಕವಾಗಿ ಗುಪ್ತವಾಗಿ ಪರಿಶೀಲನೆ ನಡೆಸಲಾಯಿತು. ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 10ರ ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಕ್ಯಾಂಟೀನ್ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಅಕ್ರಮ ಚಟುವಟಿಕೆ ಪತ್ತೆಯಾಗಿದ್ದು, ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಫರಾಧ ಸಂಖ್ಯೆ: 48/2026 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಟಿಪಿ (ITP) ಆಕ್ಟ್ ಕಲಂ 3, 4, 5 ಹಾಗೂ ಬಿ.ಎನ್.ಎಸ್ (BNS) ಕಲಂ 143(2) ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
