
ಗಾಳಿ ಮಳೆಗೆ ವಿದ್ಯುತ್ ಲೈನ್ಗೆ ಬಿದ್ದ ತೆಂಗಿನ ಗರಿ ತೆರವುಗೊಳಿಸುವಾಗ ವಿದ್ಯುತ್ ಕಂಬವೇ ಮುರಿದು ಬಿದ್ದ ಘಟನೆ ನಡೆದಿದೆ. ಲೈನ್ಮ್ಯಾನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಗಾಳಿ ಮಳೆಗೆ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ತೆಂಗಿನ ಗರಿಯನ್ನು ತೆರವುಗೊಳಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಕಂಬವೇ ಮುರಿದು ಬಿದ್ದ ಭೀಕರ ಘಟನೆ ಸುಳ್ಯದ ಪೆರಾಜೆ ಸಮೀಪದ ಪಾಲಡ್ಕ ಎಂಬಲ್ಲಿ ಮೇ 8ರಂದು ರಾತ್ರಿ ಸಂಭವಿಸಿದೆ. ಈ ವೇಳೆ ಲೈನ್ಮ್ಯಾನ್ ಒಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಪಾಲಡ್ಕದಲ್ಲಿ ಹಾದುಹೋಗುವ ಹೆದ್ದಾರಿ ಬದಿಯ ವಿದ್ಯುತ್ ತಂತಿಗಳ ಮೇಲೆ ತೆಂಗಿನ ಗರಿಯೊಂದು ಬಿದ್ದು ಸಿಲುಕಿಕೊಂಡಿತ್ತು. ರಾತ್ರಿ ವೇಳೆ ಸ್ಥಳಕ್ಕೆ ಆಗಮಿಸಿದ ಲೈನ್ಮ್ಯಾನ್, ಲೈನ್ ಕ್ಲಿಯರ್ ಮಾಡಲು ಮುಂದಾದರು. ತಂತಿಯ ಮೇಲೆ ನೇತಾಡುತ್ತಿದ್ದ ಗರಿಯನ್ನು ಅವರು ಎಳೆದು ಕೆಳಕ್ಕೆ ಹಾಕಲು ಪ್ರಯತ್ನಿಸಿದಾಗ, ಅನಿರೀಕ್ಷಿತವಾಗಿ ಪಕ್ಕದಲ್ಲಿದ್ದ ವಿದ್ಯುತ್ ಕಂಬವೇ ಬುಡ ಸಮೇತ ಮುರಿದು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದೆ.


ಕೂದಲೆಳೆ ಅಂತರದಲ್ಲಿ ಬಚಾವ್: ಕಂಬ ಮುರಿದು ಬೀಳುತ್ತಿದ್ದಂತೆಯೇ ಜಾಗರೂಕರಾದ ಲೈನ್ಮ್ಯಾನ್ ತಕ್ಷಣ ಹಿಂದೆ ಸರಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಮುರಿದು ಬಿದ್ದ ಕಂಬ ಮತ್ತು ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಸ್ಥಳೀಯರ ಸಹಕಾರದೊಂದಿಗೆ ತಂತಿ ಮತ್ತು ಕಂಬವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
