
ಕಡಬದ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಕಾರ್ಕಳ ಮೂಲದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಟ್ರುಪ್ಪಾಡಿ ಪಂಚಾಯತ್ ವ್ಯಾಪ್ತಿಯ ಕೊಲ್ಯದಕಟ್ಟ ಡ್ಯಾಂ ಬಳಿ ಈ ಘಟನೆ ಸಂಭವಿಸಿದೆ.


ಕಡಬ: ರಜೆ ಹಿನ್ನೆಲೆಯಲ್ಲಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಯ ಹೊಳೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಯದಕಟ್ಟ ಡ್ಯಾಂ ಬಳಿ ಈ ದುರಂತ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯರು ಕಾರ್ಕಳದ ವಿಮಲಗಿರಿ ನಿವಾಸಿಗಳು ಎಂದು ಗುರುತಿಸಲಾಗಿದೆ. ರಜೆಯ ಮಜಾ ಕಳೆಯಲು ಸ್ನೇಹಿತರ ತಂಡದೊಂದಿಗೆ ನದಿಗೆ ಆಗಮಿಸಿದ್ದ ಇವರು, ಅಂದಾಜು ಸಂಜೆ 3:30ರ ಸುಮಾರಿಗೆ ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರು ಎನ್ನಲಾಗಿದೆ.


ನೀರಿನ ಆಳ ತಿಳಿಯದೆ ವಿದ್ಯಾರ್ಥಿನಿಯರು ಮುಳುಗುತ್ತಿರುವುದನ್ನು ಗಮನಿಸಿದ ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.
