
ಕಡಬದ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್ ವಾರ್ಷಿಕ ಹಬ್ಬವು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಉರುಳು ಹರಕೆ, ಮೊಣಕಾಲು ನಡಿಗೆ, ಮತ್ತು ಬೆಳ್ಳಿ ರೂಪಗಳ ಸಮರ್ಪಣೆಯ ಮೂಲಕ ಹಿಂದೂ-ಮುಸ್ಲಿಂ-ಕ್ರೈಸ್ತರು ಭಕ್ತಿ ಮೆರೆದರು.


ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚಿಲಂಪಾಡಿ ‘ಸಂತ ಜಾರ್ಜ್ ಚರ್ಚ್’ನಲ್ಲಿ ಮೇ 1ರಿಂದ 7ರ ವರೆಗೆ ನಡೆದ ವಾರ್ಷಿಕ ಹಬ್ಬವು ಧರ್ಮ, ಜಾತಿ ಮತ್ತು ಮತಭೇದಗಳನ್ನು ಮೀರಿದ ಅಪೂರ್ವ ಸೌಹಾರ್ದತೆಗೆ ಸಾಕ್ಷಿಯಾಯಿತು. ಇದು ಕೇವಲ ಕ್ರೈಸ್ತ ಸಮುದಾಯದ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಹಿಂದೂ ಮತ್ತು ಮುಸ್ಲಿಂ ಬಾಂಧವರೂ ಸಮಾನ ಭಕ್ತಿಭಾವದಿಂದ ಪಾಲ್ಗೊಳ್ಳುವ ಸಾಮರಸ್ಯದ ತಾಣವಾಗಿ ಹೊರಹೊಮ್ಮಿದೆ.
ಉರುಳು ಹರಕೆ ಹಾಗೂ ಮೊಣಕಾಲು ನಡಿಗೆಯ ವಿಶಿಷ್ಟ ಭಕ್ತಿ
ತಮ್ಮ ಮನೋಭಿಲಾಷೆ ಈಡೇರಿದ ಭಕ್ತರು ಪಕ್ಕದ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಚರ್ಚ್ ಆವರಣದಲ್ಲಿ ಉರುಳು ಹರಕೆ ತೀರಿಸುವುದು ಇಲ್ಲಿನ ವಿಶೇಷ. ಇದರೊಂದಿಗೆ “ಮೊಣಕಾಲು ನಡಿಗೆ” ಎಂಬ ಕಠಿಣ ಹರಕೆಯನ್ನು ಅನೇಕರು ಸಲ್ಲಿಸಿದರು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಶಿಲುಬೆಯ ಬಳಿಯಿಂದ ಚರ್ಚ್ವರೆಗೆ ಮೊಣಕಾಲಿನಲ್ಲೇ ನಡೆದು ಸಂತ ಜಾರ್ಜ್ ಅವರ ಆಶೀರ್ವಾದ ಪಡೆದರು. ಇನ್ನು ಕೆಲವರು ತಲೆಯ ಮೇಲೆ ಸಣ್ಣ ಕಲ್ಲುಗಳನ್ನು ಹೊತ್ತು ಬಂದು ಸಮರ್ಪಿಸುವ ಮೂಲಕ ತಮ್ಮ ಕಷ್ಟಗಳನ್ನು ದೂರಮಾಡುವಂತೆ ಪ್ರಾರ್ಥಿಸಿದರು.
ಸಂಕಷ್ಟ ನಿವಾರಣೆಗೆ ಬೆಳ್ಳಿ ರೂಪಗಳ ಸಮರ್ಪಣೆ
ಅನಾರೋಗ್ಯ, ಕುಟುಂಬದ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಭಕ್ತರು ವಿವಿಧ ಆಕಾರದ ಬೆಳ್ಳಿ ರೂಪಗಳನ್ನು ಸಮರ್ಪಿಸಿದರು. ಹಾವಿನ ಹುತ್ತ, ಕೈ-ಕಾಲು, ಹೃದಯ, ಮನೆ, ಮಗು, ಸಾಕುಪ್ರಾಣಿಗಳು ಹಾಗೂ ಕೆರೆ-ಬಾವಿಗಳ ಬೆಳ್ಳಿ ಆಕೃತಿಗಳನ್ನು ಚರ್ಚ್ಗೆ ಕಾಣಿಕೆಯಾಗಿ ನೀಡುವ ಮೂಲಕ ಭಕ್ತರು ತಮ್ಮ ನಂಬಿಕೆಯನ್ನು ಪ್ರಕಟಿಸಿದರು.
ಮಕ್ಕಳ ಸಮರ್ಪಣೆ: ‘ಅಡಿಮವೆಕ್ಯಲ್’ ಆಚರಣೆ
ಸಂತಾನಭಾಗ್ಯಕ್ಕಾಗಿ ಹಂಬಲಿಸುವ ದಂಪತಿಗಳು ಇಲ್ಲಿ ಪ್ರಾರ್ಥಿಸಿ ಮಕ್ಕಳಾದ ನಂತರ, ಆ ಮಗುವಿನ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಚರ್ಚ್ಗೆ ಕರೆತಂದು ವಿಶೇಷ ಪ್ರಾರ್ಥನೆ ಸಲ್ಲಿಸುವ ‘ಅಡಿಮವೆಕ್ಯಲ್’ ಪದ್ಧತಿ ಇಲ್ಲಿ ಬಹಳ ಪ್ರಚಲಿತದಲ್ಲಿದೆ. ಅಲ್ಲದೆ, ಸಂಕಷ್ಟ ನಿವಾರಣೆಗೆ ‘ಶಿಲುಬೆ ಹರಕೆ’ (ಶ್ಲೀಬಾ ಎಡುಪ್ಪ್) ಕೂಡ ನಡೆಸಲಾಗುತ್ತದೆ.


ಕೋಳಿ ಸಮರ್ಪಣೆ ಮತ್ತು ಅಪ್ಪ ಪ್ರಸಾದದ ಔತಣ
ಇಲ್ಲಿನ ಮತ್ತೊಂದು ಪ್ರಮುಖ ಸಂಪ್ರದಾಯವೆಂದರೆ ಕೋಳಿ ಸಮರ್ಪಣೆ. ಹರಕೆ ಈಡೇರಿದ ಭಕ್ತರು ಕೋಳಿಗಳನ್ನು ಸಮರ್ಪಿಸುತ್ತಾರೆ. ಹಬ್ಬದ ದಿನಗಳಲ್ಲಿ ಸಾವಿರಾರು ಭಕ್ತರಿಗೆ ಅನ್ನದಾನ ನಡೆಯುವುದರ ಜೊತೆಗೆ ಪ್ರಸಿದ್ಧ ‘ಅಪ್ಪ ಪ್ರಸಾದ’ ವಿತರಿಸಲಾಗುತ್ತದೆ. ಜಾತಿ-ಧರ್ಮದ ಕಟ್ಟುಪಾಡುಗಳಿಲ್ಲದೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಅನ್ನಪ್ರಸಾದ ಸ್ವೀಕರಿಸುವುದು ಈ ಕ್ಷೇತ್ರದ ಸಾಮರಸ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
“ನಾಗದೋಷ, ಕುಟುಂಬದ ಕಲಹ ಹಾಗೂ ದೀರ್ಘಕಾಲದ ಅನಾರೋಗ್ಯ ನಿವಾರಣೆಗೆ ಇಲ್ಲಿನ ಪ್ರಾರ್ಥನೆ ಫಲ ನೀಡುತ್ತದೆ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಕೇರಳದ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.”
ಸೌಹಾರ್ದತೆಯ ಸಂದೇಶ: ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್ ಕ್ಷೇತ್ರವು ಒಗ್ಗಟ್ಟು ಮತ್ತು ಮಾನವೀಯತೆಯ ಸಂದೇಶ ಸಾರುತ್ತಿದೆ. “ಎಲ್ಲರೂ ದೇವರ ಮಕ್ಕಳು” ಎಂಬ ತತ್ವದಡಿ ನಡೆಯುವ ಈ ವಾರ್ಷಿಕ ಹಬ್ಬವು ಸೌಹಾರ್ದತೆ ಮತ್ತು ಸಹಬಾಳ್ವೆಯ ಜೀವಂತ ಪ್ರತೀಕವಾಗಿ ಗಮನ ಸೆಳೆಯುತ್ತಿದೆ.
