
ಸುಬ್ರಹ್ಮಣ್ಯ: ದಾಖಲೆಗಳನ್ನು ತಿದ್ದುಪಡಿ ಮಾಡಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಸುಬ್ರಹ್ಮಣ್ಯ ಪೊಲೀಸರು ಕುಲ್ಕುಂದ ಚೆಕ್ ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಮಂಜುನಾಥ ಎಂಬಾತನನ್ನು ಬಂಧಿಸಲಾಗಿದೆ.


ಘಟನೆಯ ವಿವರ: ಮೇ 7ರಂದು ರಾತ್ರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಹೇಶ್ ಪೂಜೇರಿ ಅವರು ಕರ್ತವ್ಯದಲ್ಲಿದ್ದಾಗ, ಕುಲ್ಕುಂದ ಚೆಕ್ ಪಾಯಿಂಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿ ಸಚಿನ್ ಅಥಣಿಯವರಿಂದ ಮಾಹಿತಿ ಲಭಿಸಿದೆ. ಉಪ್ಪಿನಂಗಡಿ – ಕಡಬ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಅದರಲ್ಲಿ ಎರಡು ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ದಾಖಲೆ ತಿದ್ದುಪಡಿ ವಂಚನೆ: ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ ಚಾಲಕ ಮಂಜುನಾಥ ಬೆಳ್ತಂಗಡಿ ಪಶು ಆಸ್ಪತ್ರೆಯ ವೈದ್ಯರು ನೀಡಿದ ‘ಪ್ರಾಣಿ ಸಾಗಾಣಿಕೆ ಪ್ರಮಾಣಪತ್ರ’ (Animal Transportation Certificate) ಮತ್ತು ವಾಹನದ ದಾಖಲೆಗಳನ್ನು ಹಾಜರುಪಡಿಸಿದ್ದಾನೆ. ಆದರೆ, ಈ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಾಗಾಟದ ಪರವಾನಗಿ ದಿನಾಂಕದ ಜಾಗದಲ್ಲಿ ‘07.05.2026’ ಎಂದು ತಿದ್ದುಪಡಿ ಮಾಡಿರುವುದು ಕಂಡುಬಂದಿದೆ. ಅಧಿಕಾರಿಗಳನ್ನು ದಾರಿ ತಪ್ಪಿಸಲು ಕಲರ್ ಜೆರಾಕ್ಸ್ ಪ್ರತಿಗಳನ್ನು ಬಳಸಿ ವಂಚನೆಗೆ ಯತ್ನಿಸಿರುವುದು ಸಾಬೀತಾಗಿದೆ.


ಒಂದು ಹಸು (ಅಂದಾಜು ಮೌಲ್ಯ ₹20,000/-) ಮತ್ತು ಒಂದು ಗಂಡು ದನ (ಅಂದಾಜು ಮೌಲ್ಯ ₹15,000/-). ಜಾನುವಾರು ಸಾಗಾಟಕ್ಕೆ ಬಳಸಿದ ಕೆ.ಎ. 13 ಡಿ-6468 ಸಂಖ್ಯೆಯ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 17/2026ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 233, 240, 338 r/w 3(5), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ-2020, ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ವಿವಿಧ ಸೆಕ್ಷನ್ಗಳಡಿ ಮೊಕದ್ದಮೆ ಹೂಡಲಾಗಿದೆ.
