ಕಡಬ: ಕಸದ ರಾಶಿಯಿಂದ ಸಾಂಕ್ರಾಮಿಕ ರೋಗದ ಭೀತಿ; ಪಟ್ಟಣ ಪಂಚಾಯತ್ ಮುಂಭಾಗ ಜಮಾಯಿಸಿದ ಬಿಜೆಪಿ ಬೆಂಬಲಿಗರು

kadaba times

ಕಡಬದ ತ್ಯಾಜ್ಯ ಘಟಕದ ಅವ್ಯವಸ್ಥೆ ವಿರುದ್ಧ ಬಿಜೆಪಿ ಬೆಂಬಲಿಗರು ಮತ್ತು ಕೆಲ  ಗ್ರಾಮಸ್ಥರು ಕಿಡಿಕಾರಿದ್ದಾರೆ. ಮಳೆಗಾಲಕ್ಕೂ ಮುನ್ನ ಕಸ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

kadaba times
uniq

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿರುವ  ತ್ಯಾಜ್ಯ ವಿಲೇವಾರಿ ಘಟಕವು ಸರಿಯಾದ ನಿರ್ವಹಣೆ ಇಲ್ಲದೆ ಅಕ್ಷರಶಃ ನರಕ ಸದೃಶವಾಗಿದ್ದು ಕೋಡಿಂಬಾಳ ವಾರ್ಡು ಸದಸ್ಯೆ ಅಕ್ಷತಾ ಅವರ ಮುಂದಾಳತ್ವದಲ್ಲಿ ಬಿಜೆಪಿ ಬೆಂಬಲಿಗರು ಕೆಲ ಗ್ರಾಮಸ್ಥರೊಂದಿಗೆ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗ ಆಗಮಿಸಿ   ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 ತ್ಯಾಜ್ಯ ಘಟಕದ ಸುತ್ತಮುತ್ತ  ನಾಯಿಗಳ ಕಾಟ ಹೆಚ್ಚಾಗಿದ್ದು, ರಾತ್ರಿ ವೇಳೆ ಜನರು ಸಂಚರಿಸಲು ಭಯಪಡುವಂತಾಗಿದೆ. ಘಟಕದ ಕಾಂಪೌಂಡ್ ಗೋಡೆ ಕಳಪೆ ಕಾಮಗಾರಿಯಿಂದ ಕೂಡಿದ್ದು, ಗೇಟ್ ಕೂಡ ಮುರಿದು ಬಿದ್ದಿದೆ. “ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಂದಿರುವ ಯಂತ್ರೋಪಕರಣಗಳು ಕಸದ ರಾಶಿಯ ಅಡಿಯಲ್ಲಿ ಹೂತು ಹೋಗಿವೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಸುಮ್ಮನೆ ರಾಶಿ ಹಾಕಲಾಗುತ್ತಿದೆ” ಎಂದು ಗ್ರಾಮಸ್ಥರಾದ ನಾರಾಯಣ ಪೂಜಾರಿ  ದೂರಿದರು.

ಘಟಕವು ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಕಸದ ಕೊಳಕು ನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಕೆಳಗಿನ ತೋಟಗಳಿಗೆ ಹಾಗೂ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಕಾಗೆಗಳು ಹೋಟೆಲ್ ತ್ಯಾಜ್ಯವನ್ನು ತಂದು ಜನರ ಅಂಗಳಕ್ಕೆ ಹಾಕುತ್ತಿವೆ. ಮಳೆಗಾಲ ಆರಂಭವಾಗಲು ಇನ್ನು  ಬಾಕಿ ಇರುವಾಗ, ಈ ಕಸದ ರಾಶಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.

kadaba times
kadaba times

ತ್ಯಾಗ ವ್ಯರ್ಥವಾಗುತ್ತಿದೆ: ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, “ನಾನು ಸಾರ್ವಜನಿಕ ಉದ್ದೇಶಕ್ಕಾಗಿ 2 ಎಕರೆ 40 ಸೆಂಟ್ಸ್ ಪಟ್ಟಾ ಜಾಗದಲ್ಲಿ ದಾರಿ ಬಿಟ್ಟುಕೊಟ್ಟಿದ್ದೇನೆ. ಸ್ವಂತ ಖರ್ಚಿನಲ್ಲಿ ವಿದ್ಯುತ್ ಲೈನ್ ಹಾಗೂ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಮಾಡಿದ್ದೇನೆ. ಆದರೆ ಪಟ್ಟಣ ಪಂಚಾಯತ್ ಕನಿಷ್ಠ ಒಂದು ಸ್ಟ್ರೀಟ್ ಲೈಟ್ ಹಾಕುವ ಸೌಜನ್ಯವನ್ನೂ ತೋರುತ್ತಿಲ್ಲ. ನಮ್ಮ ಜಾಗದ ರಸ್ತೆಯನ್ನು ಕೇವಲ 9 ಅಡಿಗಳಿಗೆ ಸೀಮಿತಗೊಳಿಸಿ ಕಾಂಪೌಂಡ್ ಕಟ್ಟುತ್ತಿರುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಒಂದು ವಾರದ ಗಡುವು: ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ   “ಕೇವಲ ಒಂದು ಅಥವಾ ಎರಡು ಲೋಡ್ ಕಸ ತೆಗೆದರೆ ಸಾಲದು, ಈ ತಿಂಗಳ ಅಂತ್ಯದೊಳಗೆ ಅಂದರೆ ಒಂದು ವಾರದೊಳಗೆ ಇಡೀ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮುಂದಿನ ಹೋರಾಟ ಮಾಡುವುದಾಗಿ ಬಿಜೆಪಿ ಶಕ್ತಿಕೇಂದ್ರದ ಕಾರ್ಯದರ್ಶಿ ಅಶೋಕ್ ಕುಮಾರ್ ಪಿ ಎಚ್ಚರಿಕೆ ನೀಡಿದರು. ಪಿಜಕ್ಕಳ ವಾರ್ಡ್ ಸದಸ್ಯ ದಯಾನಂದ ಗೌಡ ಪಿಜಕಳ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ. ಸೇರಿದಂತೆ ಬಿಜೆಪಿ ಬೆಂಬಲಿಗರು  ಬೆರಳಣಿಕೆಯ ಗ್ರಾಮಸ್ಥರು ಹಾಜರಿದ್ದರು.

Related Articles

Latest Articles