
ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಲು ಸೂಚಿಸಿರುವ ಕೋರ್ಟ್, 2 ವಾರ ಕ್ರಮ ಕೈಗೊಳ್ಳದಂತೆ ತಿಳಿಸಿದೆ.


ಬೆಳ್ತಂಗಡಿಯ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೀಡಲಾಗಿದ್ದ ಗಡೀಪಾರು ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ (ಏಪ್ರಿಲ್ 30) ವಜಾಗೊಳಿಸಿದೆ.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಗಡೀಪಾರು ಆದೇಶವನ್ನು ಪ್ರಶ್ನಿಸಿ ನೇರವಾಗಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವುದು ಊರ್ಜಿತವಲ್ಲ. ಕಾನೂನಿನ ಪ್ರಕಾರ ಸರ್ಕಾರದ ಗೃಹ ಕಾರ್ಯದರ್ಶಿಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಅರ್ಜಿದಾರರು ಅಲ್ಲಿಯೇ ಮೊರೆ ಹೋಗುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
2 ವಾರಗಳ ಕಾಲಾವಕಾಶ: ಅರ್ಜಿಯನ್ನು ವಜಾಗೊಳಿಸಿದರೂ, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡುವ ನಿಟ್ಟಿನಲ್ಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮುಂದಿನ ಎರಡು ವಾರಗಳವರೆಗೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮ (ಗಡೀಪಾರು ಪ್ರಕ್ರಿಯೆ) ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರಿಂದಾಗಿ ತಿಮರೋಡಿ ಅವರಿಗೆ ಗೃಹ ಇಲಾಖೆಯ ಮುಂದೆ ಮೇಲ್ಮನವಿ ಸಲ್ಲಿಸಲು ಹದಿನೈದು ದಿನಗಳ ಕಾಲಾವಕಾಶ ಸಿಕ್ಕಂತಾಗಿದೆ.


[redirect url=’https://today.kadabatimes.in/news/karnataka-high-court-dismissed-mahesh-shetty-timarodi-externment-petition’ sec=’5′]
