
2012ರಲ್ಲಿ ಕಡಬದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಅಪರಾಧಿ ಅಬ್ದುಲ್ ಅಜೀಜ್ನನ್ನು 14 ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ ಕಡಬ ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಈತನಿಗೆ 10 ವರ್ಷ ಶಿಕ್ಷೆ ವಿಧಿಸಿತ್ತು


ಕಡಬ: ಹದಿನಾಲ್ಕು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯನ್ನು ಕಡಬ ಪೊಲೀಸರು ಆಂಧ್ರಪ್ರದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: ಜನವರಿ 31, 2012 ರಂದು ಪುತ್ತೂರು ತಾಲೂಕಿನ (ಈಗಿನ ಕಡಬ) ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ಸಾರ್ವಜನಿಕ ರಸ್ತೆಯ ಮೋರಿಯ ಅಡಿಯಲ್ಲಿ ಮಹಿಳೆಯೋರ್ವರ ಕೊಳೆತ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ (ಅ. ಕ್ರ : 15/2012, ಕಲಂ : 302, 201) ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರು ಪ್ರಕರಣದ ಆಳವಾದ ತನಿಖೆ ನಡೆಸಿ, ಸುಳ್ಯದ ಅಜ್ಜವರ ನಿವಾಸಿ ಎನ್. ಎಂ. ಅಬ್ದುಲ್ ಅಜೀಜ್ (30) ಎಂಬಾತನೇ ಕೊಲೆಗಾರ ಎಂದು ಸಾಕ್ಷ್ಯಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹೈಕೋರ್ಟ್ನಿಂದ ಕಠಿಣ ಶಿಕ್ಷೆ: ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ. ಪಾಟೀಲ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಬ್ದುಲ್ ಅಜೀಜ್ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಕೆ.ಪಿ. ಯಶೋಧ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ತಲೆಮರೆಸಿಕೊಂಡಿದ್ದ ಅಪರಾಧಿ ಅಂದರ್: ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಕಾನೂನಿನ ಕಣ್ಣು ತಪ್ಪಿಸಿ ಅಪರಾಧಿ ಅಬ್ದುಲ್ ಅಜೀಜ್ ಪರಾರಿಯಾಗಿದ್ದನು. ಈತನ ಪತ್ತೆಗಾಗಿ ಜಾಲ ಬೀಸಿದ್ದ ಕಡಬ ಪೊಲೀಸ್ ಉಪನೀರಿಕ್ಷಕ ಜಂಬುರಾಜ್ ಮಹಾಜನ್ ಮತ್ತು ಅವರ ತಂಡಕ್ಕೆ ಅಪರಾಧಿ ಆಂಧ್ರಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅಲ್ಲಿ ಆತನನ್ನು ದಸ್ತಗಿರಿ ಮಾಡಿ, ಏಪ್ರಿಲ್ 25, 2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಹಲವು ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಅಪರಾಧಿಯನ್ನು ಅಂತಿಮವಾಗಿ ಪತ್ತೆ ಹಚ್ಚಿದ ಕಡಬ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
