
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ವಿದ್ಯಾರ್ಥಿನಿಯರು, SC/ST ಮತ್ತು ವರ್ಗ-1ರ ವಿದ್ಯಾರ್ಥಿಗಳಿಗೆ ಉಚಿತ ನೋಂದಣಿ ಹಾಗೂ ಶುಲ್ಕ ವಿನಾಯಿತಿ ಘೋಷಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.


ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಪರೀಕ್ಷೆ-2ಕ್ಕೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಆರ್ಥಿಕ ಅಡೆತಡೆಗಳಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲಿ ಎಂಬ ಸದುದ್ದೇಶದಿಂದ ಈ ಬಾರಿ ನಿರ್ದಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ‘ಉಚಿತ ನೋಂದಣಿ’ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಯಾರಿಗೆ ಸಿಗಲಿದೆ ಈ ಸೌಲಭ್ಯ? ಸರಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಕೆಳಗಿನ ವರ್ಗದ ವಿದ್ಯಾರ್ಥಿಗಳು ಯಾವುದೇ ಪರೀಕ್ಷಾ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳಬಹುದು:
ಎಲ್ಲಾ ವರ್ಗದ ವಿದ್ಯಾರ್ಥಿನಿಯರು: ಜಾತಿ ಅಥವಾ ಧರ್ಮದ ಭೇದವಿಲ್ಲದೆ ಎಲ್ಲಾ ಪಿಯುಸಿ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಅನ್ವಯಿಸುತ್ತದೆ.


ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳು, ಪ್ರವರ್ಗ-1ರ (Category-1) ವಿದ್ಯಾರ್ಥಿಗಳು.
ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ: ಈ ಶುಲ್ಕ ವಿನಾಯಿತಿಯು ಮುಖ್ಯವಾಗಿ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಪುನರಾವರ್ತಿತ (Repeaters) ಮತ್ತು ಫಲಿತಾಂಶ ಅಪೂರ್ಣಗೊಂಡಿರುವ (Incomplete) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. “ನಿಮ್ಮ ಶಿಕ್ಷಣದ ಹಾದಿಗೆ ಆರ್ಥಿಕ ಅಡೆತಡೆ ಬೇಡ, ಇಂದೇ ಅರ್ಜಿ ಸಲ್ಲಿಸಿ” ಎಂದು ಇಲಾಖೆಯು ವಿದ್ಯಾರ್ಥಿಗಳಿಗೆ ಕರೆ ನೀಡಿದೆ.
ಸಹಾಯವಾಣಿ ಸಂಪರ್ಕಿಸಿ: ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:08023310075,08023310076 ವಿದ್ಯಾರ್ಥಿಗಳು ಈ ಸದವಕಾಶವನ್ನು ಬಳಸಿಕೊಂಡು ಪರೀಕ್ಷೆ-2ರಲ್ಲಿ ಉತ್ತಮ ಫಲಿತಾಂಶ ಪಡೆಯಲು ಇಲಾಖೆ ಆಶಿಸಿದೆ.
