ಕಡಬ: ನಿಮ್ಮನ್ನು ರೇಪ್ ಮಾಡಿ ಬಿಸಾಕುತ್ತೇನೆ- ಸೇಲ್ಸ್ ಮ್ಯಾನ್ ಯುವತಿಯರಿಗೆ ಬೆದರಿಕೆ, ಹಲ್ಲೆ: ಯುವಕನ ವಿರುದ್ದ FIR ದಾಖಲು

kadaba times

ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದ ಯುವತಿಯರ ಮೇಲೆ ಅಸಭ್ಯ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಸ್ಥಳೀಯ ವ್ಯಕ್ತಿಯೊಬ್ಬನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ಮನೆ ಮನೆಗೆ ತೆರಳಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಯುವತಿಯರ ತಂಡವೊಂದರ ಮೇಲೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ನಡೆದಿದೆ. ಈ ಸಂಬಂಧ ಬಲ್ಯ ಗ್ರಾಮದ ನಿವಾಸಿ ಗುರುಪ್ರಸಾದ್ (30) ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನ ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವ ಮೂವರು ಯುವತಿಯರು ಏಪ್ರಿಲ್ 8 ರಂದು ಕೆಲಸದ ನಿಮಿತ್ತ ಬಲ್ಯ ಗ್ರಾಮದ ದೇರಾಜೆ ಪ್ರದೇಶಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 2:45 ರ ಸುಮಾರಿಗೆ ಯುವತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಗುರುಪ್ರಸಾದ್ ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. “ಹಣ ಕೊಡುತ್ತೇನೆ, ತನ್ನೊಂದಿಗೆ ಬರುವಂತೆ” ಕೈ ಸನ್ನೆ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಯಿ ಮುಂದೆಯೇ ಹಲ್ಲೆ:

kadaba times
kadaba times

ಈ ವಿಷಯವನ್ನು ಸಂತ್ರಸ್ತೆಯು ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ್ದು, ಆರೋಪಿಯ ವರ್ತನೆಯ ಬಗ್ಗೆ ಆತನ ತಾಯಿಗೆ ದೂರು ನೀಡಲು ಎಲ್ಲರೂ ಸೇರಿ ಮಧ್ಯಾಹ್ನ 3:30 ರ ಸುಮಾರಿಗೆ ಆರೋಪಿಯ ಮನೆಗೆ ತೆರಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಗುರುಪ್ರಸಾದ್ ಯುವತಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿಮ್ಮನ್ನು ರೇಪ್ ಮಾಡಿ ಬಿಸಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಯುವತಿಯರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕೆನ್ನೆಗೆ ಹೊಡೆದು ನೆಲಕ್ಕೆ ದೂಡಿದ್ದಾನೆ. ತಡೆಯಲು ಬಂದ ಇತರ ಇಬ್ಬರು ಸಹೋದ್ಯೋಗಿಗಳಿಗೂ ಕಾಲಿನಿಂದ ಒದ್ದು, ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಘಟನೆಯ ನಂತರ ಸಂತ್ರಸ್ತೆಯರು ತಮ್ಮ ಕಂಪನಿಯ ಮಾಲೀಕರಿಗೆ ಮಾಹಿತಿ ನೀಡಿ, ನಂತರ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಗುರುಪ್ರಸಾದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74, 79, 115(2), 352 ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಡಬ ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.ಆರೋಪಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

Related Articles

Latest Articles