
ಕಡಬದ 102 ನೆಕ್ಕಿಲಾಡಿ ಗ್ರಾಮದಲ್ಲಿ ನಡೆದ ಕಳವು ಪ್ರಕರಣದಲ್ಲಿ 12 ಗ್ರಾಂ ಚಿನ್ನ ಹಾಗೂ ನಗದು ನಾಪತ್ತೆಯಾಗಿದೆ. ಸಂಬಂಧಿಕರಾದ ಬದ್ರುದ್ದೀನ್ ಮತ್ತು ಅಶ್ರಫ್ ಮೇಲೆ ಸಂಶಯ ವ್ಯಕ್ತಪಡಿಸಿ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.


ಕಡಬ: ಮದುವೆ ಸಮಾರಂಭಕ್ಕೆಂದು ಬಂದಿದ್ದ ಸಂಬಂಧಿಕರೇ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಧಿಸಿದಂತೆ ಧರ್ಮ ಗುರು ಸಹಿತ ಇಬ್ಬರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ರೆಂಜಳ ನಿವಾಸಿ ಮಹಮ್ಮದ್ ಇಸ್ಮಾಯಿಲ್ (35) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಇಸ್ಮಾಯಿಲ್ ಅವರ ಪತ್ನಿ ಹಾಗೂ ಕುಟುಂಬದವರು ರಾಮಕುಂಜದ ಕೆ.ಕೆ ಕನ್ಸ್ಟ್ರಕ್ಷನ್ ಮಾಲೀಕ ಮಹಮ್ಮದ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಏಪ್ರಿಲ್ 3 ರಂದು ಉಪ್ಪಿನಂಗಡಿಯ ತೆಕ್ಕಾರಿನಲ್ಲಿ ಇಸ್ಮಾಯಿಲ್ ಅವರ ಅತ್ತೆಯ ತಮ್ಮನ ಮಗಳ ಮದುವೆ ಇತ್ತು. ಈ ಸಮಾರಂಭಕ್ಕಾಗಿ ಸಕಲೇಶಪುರದಿಂದ ಪತ್ನಿಯ ಚಿಕ್ಕಮ್ಮ ಮತ್ತು ಅವರ ಮಗ ಬದ್ರುದ್ದೀನ್ ಬಂದಿದ್ದರು. ಮದುವೆ ಮುಗಿಸಿ ಏಪ್ರಿಲ್ 5 ರಂದು ಸಂಜೆ ಬದ್ರುದ್ದೀನ್ ಇಸ್ಮಾಯಿಲ್ ಅವರ ಮನೆಗೆ ಬಂದಿದ್ದನು.
ಕಳವು ಪತ್ತೆಯಾದದ್ದು ಹೇಗೆ?
ಏಪ್ರಿಲ್ 6 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಫರ್ಜಾನ್ ಅವರು ಕಪಾಟಿನ ಮೇಲಿದ್ದ ತಮ್ಮ ಹ್ಯಾಂಡ್ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿಟ್ಟಿದ್ದ ತಲಾ 6 ಗ್ರಾಂ ತೂಕದ 2 ಚಿನ್ನದ ಉಂಗುರಗಳು (ಒಟ್ಟು 12 ಗ್ರಾಂ) ಮತ್ತು 1000 ರೂಪಾಯಿ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.


ಮನೆಯಲ್ಲಿ ಬ್ಯಾಗ್ ಪರಿಶೀಲನೆ ನಡೆಸುತ್ತಿರುವುದನ್ನು ಕಂಡ ಬದ್ರುದ್ದೀನ್ ತಕ್ಷಣವೇ ಮನೆಯಿಂದ ಹೊರಟು ಹೋಗಿದ್ದಾನೆ. ನಂತರ ಆತ ಅಶ್ರಫ್ ಎಂಬಾತನೊಂದಿಗೆ ಧರ್ಮಸ್ಥಳಕ್ಕೆ ತೆರಳಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬದ್ರುದ್ದೀನ್ ಮತ್ತು ಅಶ್ರಫ್ ಸೇರಿ ಚಿನ್ನ ಹಾಗೂ ಹಣವನ್ನು ಕಳವು ಮಾಡಿರಬಹುದು ಎಂದು ಇಸ್ಮಾಯಿಲ್ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಕಳವಾದ ಸೊತ್ತಿನ ಒಟ್ಟು ಮೌಲ್ಯ ಅಂದಾಜು 91,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305(a) ಮತ್ತು 3(5) ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಘಟನೆಗೆ ಸಂಬಧಿಸಿ ಬದ್ರುದ್ದೀನ್ ಶಕಲೇಶಪುರ( A1),ಅಶರ್ಫ್ ಕೋಡಿಂಬಾಳ( A2) ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
