ಕಡಬ: ಬಿಸಿಲ ಬೇಗೆಯಲ್ಲಿರುವ ಜಾನುವಾರುಗಳಿಗೆ ಪೊಲೀಸರಿಂದಲೇ ಆರೈಕೆ

kadaba times

ಕಡಬದ ನೂಜಿಬಾಳ್ತಿಲದಲ್ಲಿ ಕಂಟೈನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 19 ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ ಠಾಣಾ ಆವರಣದಲ್ಲಿರುವ ಇವುಗಳಿಗೆ ಪೊಲೀಸರು ಬಿಸಿಲಿನಲ್ಲಿ ನೀರು, ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

kadaba times
uniq

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಕಂಟೈನರ್ ಲಾರಿಯಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 19 ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಎಪ್ರಿಲ್ 3 ರಂದು ಕಡಬ ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಫಾನ್, ಪರಾರಿಯಾದ ಚಾಲಕ ನಯಾಝ್ ಮತ್ತು ಕಂಟೈನರ್ ಮಾಲೀಕ ಅಬ್ದುಲ್ ರಹಿಮಾನ್ ಎಂಬುವವರ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಿಸಿಲ ತಾಪ: ಗೋವುಗಳ ರಕ್ಷಣೆಗೆ ಪೊಲೀಸರ ಸಾಹಸ

ವಶಕ್ಕೆ ಪಡೆದ ಗೋವುಗಳನ್ನು ಸದ್ಯ ಕಡಬ ಪೊಲೀಸ್ ಠಾಣಾ ವಠಾರಕ್ಕೆ ತಂದು ಕಟ್ಟಿ ಹಾಕಲಾಗಿದೆ. ಕಳೆದ ಐದು ದಿನಗಳಿಂದ ಸುಡುತ್ತಿರುವ ಭೀಕರ ಬಿಸಿಲಿಗೆ ಗೋವುಗಳು ಹೈರಾಣಾಗಿವೆ. ಇವುಗಳನ್ನು ಶೀಘ್ರವಾಗಿ ಗೋಶಾಲೆಗೆ ಸ್ಥಳಾಂತರಿಸುವ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಬೇಕಿದೆ. ಆದರೆ, ಅಲ್ಲಿಯವರೆಗೆ ಈ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಮಾನವೀಯತೆ ಮೆರೆದಿರುವ ಕಡಬ ಪೊಲೀಸರು, ತಾವೇ ಹುಲ್ಲು ಸಂಗ್ರಹಿಸಿ ಗೋವುಗಳಿಗೆ ತಿನ್ನಿಸುತ್ತಿದ್ದಾರೆ. ಅಲ್ಲದೆ, ಬಿಸಿಲಿನಿಂದ ಬಳಲುತ್ತಿರುವ ಹಸುಗಳಿಗೆ ನೀರು ಕುಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

kadaba times
kadaba times

ಪೊಲೀಸರ ಈ ಕಾರ್ಯಕ್ಕೆ ಸ್ಥಳೀಯ ಗೋ ಪ್ರೇಮಿಗಳು ಕೈಜೋಡಿಸಿದ್ದಾರೆ. ಸುತ್ತಮುತ್ತಲ ಕೃಷಿ ತೋಟಗಳಿಂದ ಹಸಿರು ಹುಲ್ಲು ತಂದು ನೀಡುವ ಮೂಲಕ ಗೋವುಗಳ ಹಸಿವು ನೀಗಿಸಲು ಸಹಕರಿಸುತ್ತಿದ್ದಾರೆ. ಸದ್ಯಕ್ಕೆ ಠಾಣಾ ಆವರಣದಲ್ಲೇ ಗೋವುಗಳ ಪಾಲನೆ ನಡೆಯುತ್ತಿದ್ದು, ಆದಷ್ಟು ಬೇಗ ಇವುಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ರವಾನಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಕಾನೂನು ಪ್ರಕಾರ, ಪ್ರಕರಣದಲ್ಲಿ ಸಿಕ್ಕಿರುವ ಗೋವುಗಳನ್ನು ಹರಾಜು ಮಾಡಲಾಗುವುದಿಲ್ಲ ಅಥವಾ ಖಾಸಗಿ ವ್ಯಕ್ತಿಗಳಿಗೆ ಒಪ್ಪಿಸಲಾಗುವುದಿಲ್ಲ. ಗೋವು ಮರಣ ಹೊಂದಿದರೆ, ಅದರ ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತಹ ಜವಾಬ್ದಾರಿಯೂ ಪೊಲೀಸ್ ಇಲಾಖೆಯ ಮೇಲಿದೆ.

Related Articles

Latest Articles