ಮಲತ್ಯಾಜ್ಯ ಘಟಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವರಿಗೆ ಉತ್ತರ ನೀಡಿದ ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

kadaba times

ಕಡಬದ ಕಳಾರ ತಿಮರಡ್ಡದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪನೆಗೆ ವ್ಯಾಪಕ ವಿರೋಧ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಜನವಸತಿ ಪ್ರದೇಶದಲ್ಲಿ ಯೋಜನೆ: ಜಿಲ್ಲಾಧಿಕಾರಿಗಳ ಭೇಟಿಗೆ ಹೋರಾಟ ಸಮಿತಿ ಆಗ್ರಹ.

kadaba times
uniq

ಕಡಬ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಳಾರ ತಿಮರಡ್ಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕಕ್ಕೆ (STP/FSTP) ಸಂಬಂಧಿಸಿದಂತೆ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಳಾರ ಪರಿಸರ ಸಂರಕ್ಷಣಾ ಹೋರಾಟ ಸಮಿತಿ ಗಂಭೀರ ಆರೋಪ ಮಾಡಿದೆ. ಈ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಮಂಗಳವಾರ ಕಡಬ ಪಟ್ಟಣ ಪಂಚಾಯಿತಿಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿದ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯರು, ಘಟಕ ಸ್ಥಾಪನೆ ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಜನವಸತಿ ಪ್ರದೇಶದಲ್ಲಿ ಘಟಕ ಬೇಡ: ಕೆ.ಎಚ್. ಹಂಝ ಕಳಾರ

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಹಂಝ ಕಳಾರ ಅವರು, “ತಿಮರಡ್ಡದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ಈ ಪ್ರದೇಶವು ದಟ್ಟ ಜನವಸತಿಯಿಂದ ಕೂಡಿದ್ದು, ಸುತ್ತಲೂ ನೂರಾರು ಮನೆಗಳಿವೆ. ಹತ್ತಿರದಲ್ಲೇ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಪೆಲತ್ತೋಡಿ ಕುಟುಂಬ ದೈವಸ್ಥಾನ, ನಾಲೂರು ಶಂಕರ ನಾರಾಯಣ ದೇವಸ್ಥಾನ ಹಾಗೂ ಕೆರೆ ಇದೆ. ಅಲ್ಲದೆ ಇಲ್ಲಿ ಎಂಡೋಸಲ್ಫಾನ್ ಪೀಡಿತರು ಕೂಡ ವಾಸವಿದ್ದಾರೆ,” ಎಂದು ಕಳವಳ ವ್ಯಕ್ತಪಡಿಸಿದರು.

kadaba times
kadaba times

“ಕಂದಾಯ ಅಧಿಕಾರಿಗಳಿಗೆ ಈ ಎಲ್ಲಾ ಸತ್ಯಾಂಶಗಳು ಗೊತ್ತಿದ್ದರೂ, ಯೋಜನೆಯನ್ನು ಜಾರಿಗೊಳಿಸುವ ಹಠಕ್ಕೆ ಬಿದ್ದು ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಕೂಡ ಮೌನಕ್ಕೆ ಶರಣಾಗಿದ್ದಾರೆ. ಈ ಯೋಜನೆಯನ್ನು ಇಲ್ಲಿ ಜಾರಿಗೊಳಿಸಬಾರದು, ಬದಲಾಗಿ ಜನವಸತಿ ಇಲ್ಲದ ಬೇರೆ ಎಲ್ಲಿ ಬೇಕಾದರೂ ಅನುಷ್ಠಾನ ಮಾಡಿ, ನಮ್ಮ ಅಭ್ಯಂತರವಿಲ್ಲ,” ಎಂದು ಅವರು ಗುಡುಗಿದರು.

ಪರ್ಯಾಯ ಜಾಗಕ್ಕೆ ಪಂಚಾಯಿತಿ ನಿರ್ಣಯ

ವಿರೋಧದ ಕುರಿತು ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್, “ಈಗಾಗಲೇ ಪರಿಸರದ ಜನರ ವಿರೋಧದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಲಾಗಿದೆ. ಮಲತ್ಯಾಜ್ಯ ಘಟಕಕ್ಕೆ ಬೇರೆ ಸ್ಥಳ ನಿಗದಿಪಡಿಸಿಕೊಡುವಂತೆ ನಿರ್ಣಯ ಅಂಗೀಕರಿಸಿ ಕಂದಾಯ ಇಲಾಖೆಗೆ ಕಳುಹಿಸಲಾಗಿದೆ. ಮತ್ತೊಮ್ಮೆ ಆಡಳಿತ ಮಂಡಳಿ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು,” ಎಂದು ಭರವಸೆ ನೀಡಿದರು.

ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ನಡೆಸಲು ಆದೇಶವಿದೆ!

ಮನವಿ ಸ್ವೀಕರಿಸಿದ ಇ. ಲೀಲಾವತಿ ಮಾತನಾಡಿ, “ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಜಿಲ್ಲೆಯ ಇತರ ಪಂಚಾಯಿತಿಗಳಲ್ಲಿ ಈಗಾಗಲೇ ಜಾರಿಯಾಗಿದೆ. ಯೋಜನೆಯನ್ನು ಶೀಘ್ರವಾಗಿ ಮುಗಿಸಲು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶವಿದೆ. ಒಂದು ವೇಳೆ ಸ್ಥಳೀಯರ ವಿರೋಧವಿದ್ದರೆ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಆರಂಭಿಸಲು ನಮಗೆ ಸೂಚಿಸಲಾಗಿದೆ. ಆದರೂ, ಸಾರ್ವಜನಿಕರ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು,” ಎಂದರು.ನಂತರ ಹೋರಾಟಗಾರರು ಕಡಬ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಿ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related Articles

Latest Articles