
ಮದುವೆ ಸಂಬಂಧಗಳು ಕೂಡಿಬರುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪ ನಡೆದಿದೆ


ಮದುವೆಗೆ ಸೂಕ್ತ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಶನಿವಾರ ಕಡೂರು ತಾಲೂಕಿನ ಯಗಟಿ ಸಮೀಪದ ಭೈರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿ ಕುಮಾರ್ (26) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಮೃತ ಕುಮಾರ್ಗೆ ಮದುವೆ ಮಾಡಲು ಕುಟುಂಬಸ್ಥರು ಕಳೆದ ಕೆಲವು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರು. ಆದರೆ, ಹಲವು ಪ್ರಯತ್ನಗಳ ನಂತರವೂ ಯಾವುದೇ ಸಂಬಂಧಗಳು ಕೂಡಿಬಂದಿರಲಿಲ್ಲ. ಇದರಿಂದಾಗಿ ಕುಮಾರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.


ಇತ್ತೀಚೆಗೆ ಕುರಿ ಮೇಯಿಸುವ ಕಾಯಕಕ್ಕಾಗಿ ಕಡೂರು ತಾಲೂಕಿನ ಭೈರಗೊಂಡನಹಳ್ಳಿ ಗ್ರಾಮಕ್ಕೆ ಬಂದಿದ್ದ ಕುಮಾರ್, ಶುಕ್ರವಾರ ರಾತ್ರಿ ವೇಳೆ ತೆಂಗಿನ ಮರ ಏರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮುಂಜಾನೆ ಈ ವಿಷಯ ಬೆಳಕಿಗೆ ಬಂದಿದೆ
ವಿಷಯ ತಿಳಿದ ತಕ್ಷಣ ಯಗಟಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
