
ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಯ ಎಚ್ಚರಿಕೆ ನೀಡಲಾಗಿದೆ


ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಪೋಕ್ಸೋ (POCSO) ಕಾಯಿದೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕು ಎಂದು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಏನಿದು ಹೊಸ ಮಾರ್ಗಸೂಚಿ?
ಖಾಸಗಿ ಆಸ್ಪತ್ರೆಗಳಿಗೆ ಬರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆ ಕಂಡುಬಂದಲ್ಲಿ, ಚಿಕಿತ್ಸೆ ನೀಡುವ ವೈದ್ಯರು ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ:
ಪೊಲೀಸ್ ವರದಿ: ತಕ್ಷಣವೇ ವಿಶೇಷ ಜುವೆನೈಲ್ ಪೊಲೀಸ್ ಘಟಕ (SJPU) ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ಇಲಾಖಾ ಮಾಹಿತಿ: ಚೈಲ್ಡ್ ಹೆಲ್ಪ್ಲೈನ್ (1098) ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ವರದಿ ಸಲ್ಲಿಸಬೇಕು.
ಗೌಪ್ಯತೆ: ರೋಗಿಯ ವಿವರಗಳನ್ನು ಅತ್ಯಂತ ಗೌಪ್ಯವಾಗಿಡಬೇಕು ಮತ್ತು ತನಿಖಾ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಬೇಕು.


ಕಾನೂನು ಕ್ರಮದ ಎಚ್ಚರಿಕೆ
ಪೋಕ್ಸೋ ಕಾಯಿದೆಯ ಸೆಕ್ಷನ್ 19(1) ರ ಪ್ರಕಾರ ಪ್ರಕರಣದ ಬಗ್ಗೆ ತಿಳಿದಿದ್ದರೂ ವರದಿ ಮಾಡದಿರುವುದು ಕಾನೂನು ಬಾಹಿರವಾಗಿದೆ. ಈ ನಿಯಮವನ್ನು ಉಲ್ಲಂಘಿಸುವ ಆಸ್ಪತ್ರೆ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ಸೆಕ್ಷನ್ 21(2) ರ ಅಡಿಯಲ್ಲಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.
ಕಡತದ ಸಂಖ್ಯೆ: ಈ ಮಹತ್ವದ ಆದೇಶವನ್ನು ಕಡತದ ಸಂಖ್ಯೆ ಡಿಡಿ/ಪೋಕ್ಸೋ/2015-26 (E-2129971) ಅಡಿಯಲ್ಲಿ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ತರಬೇತಿ ಕಡ್ಡಾಯ
ಆಸ್ಪತ್ರೆಗಳು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ತಮ್ಮ ಸಿಬ್ಬಂದಿಗೆ ಪೋಕ್ಸೋ ಕಾಯಿದೆಯ ‘ಎಡ್ಯು-ಮಾಡ್ಯೂಲ್ಗಳ’ (Edu-modules) ಕುರಿತು ತರಬೇತಿ ನೀಡಬೇಕು. ಇದರಿಂದ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮತ್ತು ಕಾನೂನು ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.
ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ಬಾಲ ಗರ್ಭಿಣಿ ಪ್ರಕರಣಗಳನ್ನು ಮರೆಮಾಚುವಂತಿಲ್ಲ. ಒಂದು ವೇಳೆ ವರದಿ ಮಾಡದೆ ನಿರ್ಲಕ್ಷ್ಯ ವಹಿಸಿದರೆ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿ ನೇರ ಹೊಣೆಗಾರರಾಗಬೇಕಾಗುತ್ತದೆ.
