ಹೆಸರು ಬದಲಿಸಿ ಆಂಧ್ರದ ಜೈಲು ಸೇರಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪತ್ತೆ

kadaba times

ಕಡಬ: ಹಲವು ಘೋರ ಅಪರಾಧಗಳಲ್ಲಿ ಭಾಗಿಯಾಗಿ ಕಳೆದ ಎಂಟು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಸುಳ್ಯ ಮೂಲದ ಕುಖ್ಯಾತ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ. ಅಜೀಜ್ ಎಂಬಾತನೇ ಪತ್ತೆಯಾದ ಆರೋಪಿ.

kadaba times
uniq

​ಹಿನ್ನೆಲೆ ಏನು?

​2012ರಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ (ಅ.ಕ್ರ: 15/2012, ಕಲಂ: 302, 201 IPC) ಈತ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಈತನಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈತ ಸತತವಾಗಿ ಪ್ರಯತ್ನಿಸುತ್ತಲೇ ಬಂದಿದ್ದ.

​ಸಿನಿಮೀಯ ಮಾದರಿಯಲ್ಲಿ ಪರಾರಿ

​2018ರಲ್ಲಿ ಕೇರಳ ಪೊಲೀಸರು ಈತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾಗ, ಅಜೀಜ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡಿದ್ದ. ಅಲ್ಲಿಂದ ಈತ ನಾಪತ್ತೆಯಾಗಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ.

​ಹೆಸರು ಬದಲಿಸಿ ಆಂಧ್ರದಲ್ಲಿ ವಾಸ

​ಪೊಲೀಸರಿಂದ ತಪ್ಪಿಸಿಕೊಂಡ ನಂತರ ಅಜೀಜ್ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ. ಕಲಬುರಗಿ ಜೇವರ್ಗಿ ನಿವಾಸಿ ‘ಬಸವರಾಜು’ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ. ಇತ್ತ ಕರ್ನಾಟಕ ಪೊಲೀಸರು ಈತನಿಗಾಗಿ ಹುಡುಕಾಟ ಮುಂದುವರಿಸಿದ್ದರು.

​ಸಿಕ್ಕಿಬಿದ್ದಿದ್ದು ಹೇಗೆ?

​ಕಡಬ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಸತತ ಕಾರ್ಯಾಚರಣೆಯ ಮೂಲಕ ಈತನ ಜಾಡನ್ನು ಬೆನ್ನಟ್ಟಿದಾಗ, ಅಜೀಜ್ ಪ್ರಸ್ತುತ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿ ಇರುವುದು ದೃಢಪಟ್ಟಿದೆ. ಅಲ್ಲಿ ಯಾವುದೋ ಬೇರೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಈತ, ತನ್ನ ನಿಜವಾದ ಹೆಸರನ್ನು ಮುಚ್ಚಿಟ್ಟು ಬಸವರಾಜು ಎಂಬ ಹೆಸರಿನಲ್ಲೇ ಜೈಲು ಸೇರಿದ್ದ.

kadaba times
kadaba times

​ಮುಂದಿನ ಕ್ರಮ:

ಆರೋಪಿಯನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ‘ಬಾಡಿ ವಾರಂಟ್’ ಮೂಲಕ ವಶಕ್ಕೆ ಪಡೆದು, ಶಿಕ್ಷೆ ಅನುಭವಿಸಲು ಕರ್ನಾಟಕಕ್ಕೆ ಕರೆತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related Articles

Latest Articles