
ಕೊಲ್ಲಮೊಗ್ರು ಗ್ರಾಮದ ಶಿರೂರಿನಲ್ಲಿ ಚಹಾ ಮಾಡುತ್ತಿದ್ದ ವೇಳೆ ಸೀರೆಗೆ ಬೆಂಕಿ ತಗುಲಿ ತಿಲಕ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಿಸಲು ಬಂದ ಮಗ ಸುಬ್ರಹ್ಮಣ್ಯ ಅವರಿಗೂ ಗಾಯಗಳಾಗಿದ್ದು, ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ


ಸುಬ್ರಹ್ಮಣ್ಯ: ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಸುಬ್ರಹ್ಮಣ್ಯ ಬೊಳಿಯಾನ ಅವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಾರ್ಚ್ 10ರಂದು ನಡೆದಿದೆ.
ಘಟನೆಯ ವಿವರ: ಮಾರ್ಚ್ 10ರಂದು ಬೆಳಗ್ಗೆ ಸುಬ್ರಹ್ಮಣ್ಯ ಅವರ ತಾಯಿ ತಿಲಕ ಅವರು ಅಡುಗೆ ಮನೆಯಲ್ಲಿ ಚಹಾ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೈತುಂಬಾ ವ್ಯಾಪಿಸಿದ್ದು, ಗಾಬರಿಗೊಂಡ ತಿಲಕ ಅವರು ಜೋರಾಗಿ ಕಿರುಚಾಡಿದ್ದಾರೆ.


ತಾಯಿಯ ಬೊಬ್ಬೆ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ ಮಗ ಸುಬ್ರಹ್ಮಣ್ಯ ಅವರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಪ್ರಯತ್ನದಲ್ಲಿ ಸುಬ್ರಹ್ಮಣ್ಯ ಅವರ ಕೈಗಳಿಗೂ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಿಲಕ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
