
ಕಡಬ ತಾಲೂಕಿನ ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಕಲ್ಪುರೆ ನಾರಾಯಣ ಭಟ್ ಅವರಿಗೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ‘ಧರ್ಮ ಸಾರಥಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.


ಕಡಬ: ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ, ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಕಲ್ಪುರೆ ನಾರಾಯಣ ಭಟ್ ಅವರಿಗೆ ‘ಧರ್ಮ ಸಾರಥಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇವಸ್ಥಾನದ ನವೀಕರಣ, ಪುನರ್ಪ್ರತಿಷ್ಠಾ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಪುಣ್ಯ ಸಂದರ್ಭದಲ್ಲಿ ಸುಬ್ರಹ್ಮಣ್ಯದ ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನಂ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಪುರಸ್ಕಾರ ನೀಡಿ ಆಶೀರ್ವದಿಸಿದರು.
ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿರುವ ಬೊಳ್ಳೂರು ದೇವಸ್ಥಾನವು 25 ವರ್ಷಗಳ ಹಿಂದೆ ಪೂಜೆ-ಪುನಸ್ಕಾರಗಳಿಲ್ಲದೆ ಅತ್ಯಂತ ಶಿಥಿಲಾವಸ್ಥೆಯಲ್ಲಿತ್ತು. ಅಂತಹ ಸಂದರ್ಭದಲ್ಲಿ ದೇವಸ್ಥಾನದ ಪುನರುತ್ಥಾನಕ್ಕಾಗಿ ಮುತುವರ್ಜಿ ವಹಿಸಿದ ಕಲ್ಪುರೆ ನಾರಾಯಣ ಭಟ್ ಅವರು, ಗ್ರಾಮಸ್ಥರ ನೆರವಿನೊಂದಿಗೆ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿದರು. ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಎರಡು ಬಾರಿ ಬ್ರಹ್ಮಕಲಶೋತ್ಸವವು ಶಾಸ್ತ್ರಬದ್ಧವಾಗಿ ನೆರವೇರಿದೆ.


ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾತನಾಡಿ, “ಕಲ್ಪುರೆ ನಾರಾಯಣ ಭಟ್ ಅವರ ಶ್ರಮ ಮತ್ತು ಭಕ್ತಿ ಅನನ್ಯವಾದುದು. ಪ್ರಸ್ತುತ ಅವರ ಪುತ್ರ ರಮೇಶ್ ಕಲ್ಪುರೆ ಅವರ ಅಧ್ಯಕ್ಷತೆಯಲ್ಲಿ ಊರವರ ಸಹಕಾರದೊಂದಿಗೆ ದೇವಸ್ಥಾನದ ನವೀಕರಣದಂತಹ ಮಹತ್ಕಾರ್ಯ ನಡೆದಿರುವುದು ಗ್ರಾಮಕ್ಕೆ ಸುಭಿಕ್ಷೆಯನ್ನು ತರಲಿದೆ. ಅವರ ಧಾರ್ಮಿಕ ಸೇವೆ ಇತರರಿಗೆ ಅನುಕರಣೀಯ,” ಎಂದು ಶ್ಲಾಘಿಸಿದರು.
ಕುಟುಂಬಸ್ಥರಿಂದ ಪುರಸ್ಕಾರ ಸ್ವೀಕಾರ
ಕಲ್ಪುರೆ ನಾರಾಯಣ ಭಟ್ ಅವರು ಅನಾರೋಗ್ಯದ ಕಾರಣದಿಂದ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದಿದ್ದರಿಂದ, ಅವರ ಪರವಾಗಿ ಪತ್ನಿ ಜಯಲಕ್ಷ್ಮಿ ನಾರಾಯಣ ಭಟ್, ಪುತ್ರ ರಮೇಶ್ ಕಲ್ಪುರೆ, ಪುತ್ರಿ ಡಾ. ವೀಣಾ ರಾಜಾರಾಮ ಆಚಾರ್ಯ ಮತ್ತು ಸೊಸೆ ರಾಧಿಕಾ ರಮೇಶ್ ಅವರು ಗೌರವವನ್ನು ಸ್ವೀಕರಿಸಿದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
ಈ ಧಾರ್ಮಿಕ ಸಭೆಯಲ್ಲಿಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ,ಅಕ್ಷತಾ ಶೆಟ್ಟಿ, ಉಪನ್ಯಾಸಕಿ, ಸುರತ್ಕಲ್ ಗೋವಿಂದ ದಾಸ್ ಕಾಲೇಜು,ಬಾಬು ನಾಯ್ಕ ಎ., ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಜನಾರ್ದನ ಗೌಡ ಪುತ್ತಿಲ, ಮೇದಪ್ಪ ಗೌಡ ಡೆಪ್ಪುಣಿ, ಅಮರನಾಥ ಶೆಟ್ಟಿಕುಂಜತ್ತೋಡಿ, ಶರತ್ ಪಂಜೋಡಿ.ಪ್ರಮುಖರಾದ ವೆಂಕಟ್ರಮಣ ಗೌಡ ಪಾಂಗ, ಸಾಂತಪ್ಪ ಗೌಡ ಕೋಲಂತ್ತಾಡಿ, ರಾಮಚಂದ್ರ ರೈ ಹೊಸಮಜಲು ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
