
ಕಡಬದ ಐತ್ತೂರು ಗ್ರಾಮದ ಶಿವಾಜಿನಗರದಲ್ಲಿ ಸ್ಕೂಟರ್ಗೆ ನಾಯಿ ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗ ಗಾಯಗೊಂಡಿದ್ದಾರೆ. ಘಟನೆ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಕಡಬ: ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ದಿಢೀರ್ ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿಯಾಗಿ ತಂದೆ ಮತ್ತು ಮಗ ಗಾಯಗೊಂಡ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಶಿವಾಜಿನಗರದಲ್ಲಿ ಮಾ. 9ರಂದು ಬೆಳಿಗ್ಗೆ ಸಂಭವಿಸಿದೆ.
ಘಟನೆಯ ವಿವರ: ಸ್ಕೂಟರ್ ಸವಾರ ನಿವಿನ್ ಕುರಿಯಾಕೋಸ್ ಹಾಗೂ ಅವರ ತಂದೆ ಕುರಿಯಕೋಸ್ ಪಿ.ಎ. ಗಾಯಗೊಂಡವರು. ಇವರು ಮಾರ್ಚ್ 9ರಂದು ಬೆಳಿಗ್ಗೆ ಕರ್ಮಾಯಿಯಿಂದ ಮರ್ದಾಳ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಐತ್ತೂರು ಗ್ರಾಮದ ಶಿವಾಜಿನಗರ ಎಂಬಲ್ಲಿಗೆ ತಲುಪಿದಾಗ ನಾಯಿಯೊಂದು ಸ್ಕೂಟರ್ಗೆ ಅಡ್ಡ ಬಂದಿದೆ. ಈ ವೇಳೆ ಸವಾರ ನಿವಿನ್ ಸ್ಕೂಟರ್ ನಿಯಂತ್ರಿಸಲು ಯತ್ನಿಸಿದಾಗ ವಾಹನ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ.


ಅಪಘಾತದ ತೀವ್ರತೆಗೆ ಹಿಂಬದಿ ಸವಾರ ಕುರಿಯಕೋಸ್ ಪಿ.ಎ. ಅವರಿಗೆ ತಲೆ, ಬಲಗಾಲು ಹಾಗೂ ತೊಡೆಯ ಭಾಗಕ್ಕೆ ಗಾಯಗಳಾಗಿವೆ. ಸವಾರ ನಿವಿನ್ ಅವರಿಗೆ ಎಡಗಾಲಿಗೆ ತರಚಿದ ಗಾಯಗಳಾಗಿವೆ. ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಎಂಬವರು ತಕ್ಷಣವೇ ಸ್ಪಂದಿಸಿ, ಗಾಯಾಳುಗಳನ್ನು ತಮ್ಮ ಆಟೋ ರಿಕ್ಷಾದಲ್ಲಿ ಕಡಬದ ಜೆಎಂಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿವಿನ್ ಕುರಿಯಾಕೋಸ್ ಅವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಕುರಿಯಕೋಸ್ ಪಿ.ಎ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
