
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮವನ್ನು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿಸುವಂತೆ ಗ್ರಾಮಸ್ಥರ ಪರವಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.


ಕಡಬ: ಭೌಗೋಳಿಕ ಅಂತರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮವನ್ನು ಪ್ರಸ್ತುತ ಇರುವ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಹೊರತುಪಡಿಸಿ, ಹತ್ತಿರದ ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಸಂಬಂಧ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ.
ದೂರದ ಬೆಳ್ಳಾರೆಗಿಂತ ಹತ್ತಿರದ ಕಡಬವೇ ಲೇಸು: ಎಡಮಂಗಲ ಗ್ರಾಮವು ಪ್ರಸ್ತುತ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ಎಡಮಂಗಲ ಕೇಂದ್ರದಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ಇರುವ ದೂರ ಸುಮಾರು 13 ಕಿ.ಮೀ.. ಇದಕ್ಕೆ ವ್ಯತಿರಿಕ್ತವಾಗಿ, ಕಡಬ ಪೊಲೀಸ್ ಠಾಣೆಯು ಎಡಮಂಗಲದಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗೆ ಹತ್ತಿರದ ಠಾಣೆಯನ್ನು ತಲುಪುವುದು ಇದರಿಂದ ಸುಲಭವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಗ್ರಾಮ ಸಭೆಯಲ್ಲಿ ನಿರ್ಣಯ: ಈ ಬೇಡಿಕೆಯು ಇಂದು ನಿನ್ನೆಯದಲ್ಲ. ಕಳೆದ 2025ರ ಅಕ್ಟೋಬರ್ 16ರಂದು ನಡೆದ ಎಡಮಂಗಲ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಅಧಿಕೃತವಾಗಿ ಬೇಡಿಕೆ ಮಂಡಿಸಿದ್ದರು. ಗ್ರಾಮ ಸಭೆಯ ನಿರ್ಣಯದಂತೆ ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು 2025ರ ನವೆಂಬರ್ 26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಈ ಕುರಿತು ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದರು.
ಶಾಸಕರಿಗೆ ಮನವಿ ಸಲ್ಲಿಸಿದ್ದ ಗ್ರಾಮಸ್ಥ : ಗ್ರಾಮದ ನಿವಾಸಿ ವಿನಯಚಂದ್ರ ಅವರು ಈ ಮರು ವಿಂಗಡಣೆ ಕುರಿತು ನಿರಂತರವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಇವರು ಎಡಮಂಗಲ ಗ್ರಾಮ ಪಂಚಾಯತ್ ಹಾಗೂ ಶಾಸಕರಿಗೂ ಈ ಬಗ್ಗೆ ಮನವಿ ಸಲ್ಲಿಸಿ, ಸಾರ್ವಜನಿಕ ಸುರಕ್ಷತೆ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಈ ಬದಲಾವಣೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು.
ಗೃಹ ಸಚಿವರಿಗೆ ಶಾಸಕಿ ಪತ್ರ: ಈ ಮನವಿಗೆ ಸ್ಪಂದಿಸಿರುವ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾರ್ಚ್ 9, 2026 ರಂದು ಗೃಹ ಸಚಿವರಿಗೆ ಪತ್ರ ಬರೆದು, “ಎಡಮಂಗಲ ಗ್ರಾಮವನ್ನು ಕಡಬ ಠಾಣಾ ವ್ಯಾಪ್ತಿಗೆ ಒಳಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಕೋರಿದ್ದಾರೆ. ಈ ಪತ್ರದ ಪ್ರತಿಯನ್ನು ಪೊಲೀಸ್ ಮಹಾ ನಿರ್ದೇಶಕರಿಗೂ (DG & IGP) ರವಾನಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.
