ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಹೋರಿಗಳ ಕಾಳಗ: ಎಡವಿ ಬಿದ್ದು ಮಗು-ಮಹಿಳೆಗೆ ಗಾಯ

ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!

kadaba times

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಹೋರಿಗಳ ಜಗಳದಿಂದಾಗಿ ಮಹಿಳೆ ಮತ್ತು ಮಗುವಿಗೆ ಗಾಯವಾಗಿದೆ. ದೇಗುಲದ ಕೋಟಿ ಕೋಟಿ ಆದಾಯದ ನಡುವೆಯೂ ಭಕ್ತರ ಭದ್ರತೆ ಪ್ರಶ್ನಾರ್ಥಕವಾಗಿದೆ.ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಬೀಡಾಡಿ ಹೋರಿಗಳ ಜಗಳದಿಂದಾಗಿ ಮಹಿಳೆ ಮತ್ತು ಮಗು ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಕ್ಷೇತ್ರದ ಪಾವಿತ್ರ್ಯತೆ ಮತ್ತು ಭಕ್ತರ ಸುರಕ್ಷತೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯಾಡಳಿತದ ಮೌನ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

kadaba times
uniq

ರಥಬೀದಿಯಲ್ಲಿ ಎರಡು ಹೋರಿಗಳ ನಡುವೆ ಭೀಕರ ಕಾಳಗ ಏರ್ಪಟ್ಟಿತ್ತು. ಅಕ್ಕಪಕ್ಕದಲ್ಲಿದ್ದವರು ಇವುಗಳನ್ನು ಬಿಡಿಸಲು ಪ್ರಯತ್ನಿಸಿದಾಗ, ಹೋರಿಗಳು ರಚ್ಚೆಗೇರಿ ಭಕ್ತರ ಗುಂಪಿನತ್ತ ನುಗ್ಗಿವೆ. ಈ ವೇಳೆ ಪ್ರಾಣಭಯದಿಂದ ಓಡಲು ಯತ್ನಿಸಿದ ಮಹಿಳೆ ಮತ್ತು ಮಗು ಎಡವಿ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಇವರ ರಕ್ಷಣೆಗೆ ಧಾವಿಸಿ, ಉಪಚರಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.

ಆದಾಯದಲ್ಲಿ ನಂಬರ್ 1, ಭದ್ರತೆಯಲ್ಲಿ ಶೂನ್ಯ!

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ದೇಗುಲಗಳಲ್ಲಿ ಮುಂಚೂಣಿಯಲ್ಲಿದೆ. ಕೋಟಿ ಕೋಟಿ ರೂಪಾಯಿ ಕಾಣಿಕೆ ಹರಿದು ಬಂದರೂ, ಇಲ್ಲಿಗೆ ಬರುವ ಭಕ್ತರಿಗೆ ಕನಿಷ್ಠ ಭದ್ರತೆ ಒದಗಿಸಲು ಆಡಳಿತ ಮಂಡಳಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.ಬೀಡಾಡಿ ಜಾನುವಾರು ಮತ್ತು ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ರಥಬೀದಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿಗಳು ಮುಕ್ತವಾಗಿ ಅಡ್ಡಾಡುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. “ದೇವರಿಗೆ ಕಾಣಿಕೆ ನೀಡುವ ಭಕ್ತರಿಗೆ ರಸ್ತೆಯಲ್ಲಿ ನೆಮ್ಮದಿಯಾಗಿ ನಡೆಯಲು ಸಾಧ್ಯವಿಲ್ಲದಿದ್ದರೆ ಇಷ್ಟೊಂದು ಆದಾಯ ಯಾವುದಕ್ಕೆ?” ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

kadaba times
kadaba times
ನಿಯಂತ್ರಣಕ್ಕೆ ತಕ್ಷಣದ ಆಗ್ರಹ

ಕ್ಷೇತ್ರದಲ್ಲಿ ಬೀಡಾಡಿ ದನಗಳ ಹಾವಳಿ ಇಂದು ನಿನ್ನೆಯದಲ್ಲ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಗಳು ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಕೂಡಲೇ ಈ ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸಲು ಅಥವಾ ರಥಬೀದಿಯಲ್ಲಿ ಪ್ರಾಣಿಗಳ ಪ್ರವೇಶಕ್ಕೆ ತಡೆ ಒಡ್ಡಲು ಸೂಕ್ತ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಹಾಗೂ ಭಕ್ತ ಸಮೂಹ ಒತ್ತಾಯಿಸಿದ್ದಾರೆ.

Related Articles

Latest Articles