
ಕಡಬದ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ಚಾಲಕ ಆತ್ಮಾನಂದ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ: ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಆಟೋರಿಕ್ಷಾವೊಂದು ಅಪಘಾತಕ್ಕೀಡಾಗಿ ಪಲ್ಟಿಯಾದ ಪರಿಣಾಮ, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಫೆಬ್ರವರಿ 28ರಂದು ಸಂಜೆ ಸಂಭವಿಸಿದೆ.
ಘಟನೆಯ ವಿವರ: ಐತ್ತೂರು ಗ್ರಾಮದ ನಿವಾಸಿ ರಂಜಿತ್ (38) ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಮರ್ದಾಳದಿಂದ ಕೊಡಂದೂರು ಕಡೆಗೆ ತೆರಳುತ್ತಿದ್ದಾಗ, ಸಂಜೆ ಸುಮಾರು 7:15ರ ಸುಮಾರಿಗೆ ಪಾಲೆತ್ತಡ್ಕ ಎಂಬಲ್ಲಿ ರಸ್ತೆಯ ಮಧ್ಯೆ ಆಟೋರಿಕ್ಷಾವೊಂದು (KA 21 C 9989) ಪಲ್ಟಿಯಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಪರಿಶೀಲಿಸಿದಾಗ, ಅದು ಅವರ ಪರಿಚಯಸ್ಥರಾದ ಐತ್ತೂರು ಗ್ರಾಮದ ಆತ್ಮಾನಂದ (40) ಎಂಬವರಿಗೆ ಸೇರಿದ ರಿಕ್ಷಾ ಎಂದು ತಿಳಿದುಬಂದಿದೆ.
ಅಪಘಾತದ ಭೀಕರತೆಗೆ ಚಾಲಕ ಆತ್ಮಾನಂದ ರಸ್ತೆಯ ಪಕ್ಕದಲ್ಲಿ ಎಡಗೈ, ಎಡಕಾಲು ಹಾಗೂ ಭುಜಕ್ಕೆ ರಕ್ತಗಾಯಗಳಾಗಿ ಬಿದ್ದಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಮತ್ತೊಬ್ಬ ರಿಕ್ಷಾ ಚಾಲಕ ಹೈದರ್ ಮತ್ತು ರಂಜಿತ್ ಸೇರಿ ಗಾಯಾಳುವನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.


ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ದಾಖಲು: ಕಡಬದ ವೈದ್ಯಾಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಸದ್ಯ ಆತ್ಮಾನಂದ ಅವರು ಪುತ್ತೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ರಂಜಿತ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS-2023) ಸೆಕ್ಷನ್ 281 ಹಾಗೂ 125(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
