
ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕಕ್ಕೆ ಕಾನೂನಿನ ನೆಪವೊಡ್ಡಿ ನಿರ್ಬಂಧ ಹೇರುತ್ತಿರುವುದನ್ನು ಖಂಡಿಸಿ, ಮಾ.1 ರಂದು ಆಲಂಕಾರಿನಲ್ಲಿ ದ.ಕ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯಿಂದ ಹಕ್ಕೋತ್ತಾಯ ಸಭೆ ಆಯೋಜಿಸಲಾಗಿದೆ.


ಕಡಬ: ತುಳುನಾಡಿನ ರೈತಾಪಿ ವರ್ಗದ ಭಾವನಾತ್ಮಕ ಹಾಗೂ ಸಾಂಪ್ರದಾಯಿಕ ಕ್ರೀಡೆಯಾಗಿರುವ ‘ಕೋಳಿ ಅಂಕ’ಕ್ಕೆ ಕಾನೂನಿನ ನೆಪವೊಡ್ಡಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿರ್ಬಂಧ ಹೇರುತ್ತಿರುವುದನ್ನು ಪ್ರತಿಭಟಿಸಿ ಹಾಗೂ ಈ ಆಚರಣೆಯನ್ನು ಮುಂದುವರಿಸಲು ಪೂರಕವಾಗಿ ಕಾನೂನು ರಚಿಸುವಂತೆ ಒತ್ತಾಯಿಸಿ ಮಾ.01 ರಂದು ಆಲಂಕಾರಿನಲ್ಲಿ ಬೃಹತ್ ಹಕ್ಕೋತ್ತಾಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯ ಜಿಲ್ಲಾ ಮುಖಂಡ ಇಡ್ಯಾಡಿ ಶಿವಣ್ಣ ಗೌಡ, “ಆಲಂಕಾರು ಸಿ.ಎ ಬ್ಯಾಂಕ್ನ ದೀನದಯಾಳು ರೈತ ಭವನದಲ್ಲಿ ಈ ಸಭೆ ನಡೆಯಲಿದೆ. ತುಳುನಾಡಿನ ಪ್ರತಿಯೊಂದು ಆಚರಣೆಯ ಹಿಂದೆ ಅದರದ್ದೇ ಆದ ನಂಬಿಕೆ ಮತ್ತು ಚೌಕಟ್ಟುಗಳಿವೆ. ಸುಮಾರು 850 ವರ್ಷಗಳ ಇತಿಹಾಸವಿರುವ ಕೋಳಿ ಅಂಕವು ಕೇವಲ ಕ್ರೀಡೆಯಲ್ಲ, ಅದು ನಮ್ಮ ದೈವಿಕ ನಂಬಿಕೆಯ ಒಂದು ಭಾಗ,” ಎಂದು ತಿಳಿಸಿದರು.
ದೈವಾರಾಧನೆಯೊಂದಿಗೆ ಅವಿನಾಭಾವ ಸಂಬಂಧ
ದೈವಗಳ ನೇಮೋತ್ಸವ, ಗೊಣೆ ಮುಹೂರ್ತದ ಸಂದರ್ಭದಲ್ಲಿ ‘ಕೋಳಿಗೂಟ’ ವಾಡಿಕೆಯಲ್ಲಿದೆ. ಕೋಳಿ ಅಂಕದ ಮೂಲಕ ಬಿಂದಾರ್ಪಣೆ ನಡೆಸುವುದರಿಂದ ಆ ಪ್ರದೇಶದಲ್ಲಿ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬ ಗಾಢ ನಂಬಿಕೆ ಜನರಲ್ಲಿದೆ. “ಜಲ್ಲಿಕಟ್ಟು, ಕಂಬಳ, ಹೋರಿ ಓಟ ಹಾಗೂ ಕುದುರೆ ರೇಸ್ಗಳಿಗೆ ಸರ್ಕಾರ ಅನುಮತಿ ನೀಡುವಾಗ, ತುಳುನಾಡಿನ ಸಂಪ್ರದಾಯಬದ್ಧ ಕೋಳಿ ಅಂಕಕ್ಕೆ ಯಾಕೆ ನಿರ್ಬಂಧ ಹೇರಬೇಕು?” ಎಂದು ಅವರು ಪ್ರಶ್ನಿಸಿದರು.


ವಿಧಾನಸೌಧದವರೆಗೂ ಹೋರಾಟದ ಎಚ್ಚರಿಕೆ
ಕೋಳಿ ಅಂಕವನ್ನು ಸಾಂಪ್ರದಾಯಿಕವಾಗಿ ನಡೆಸಲು ಸರ್ಕಾರ ಕಾನೂನು ರೂಪಿಸುವವರೆಗೆ ನಮ್ಮ ಹೋರಾಟ ನಿಲ್ಲದು, ಇದು ವಿಧಾನಸೌಧದವರೆಗೂ ತಲುಪಲಿದೆ ಎಂದು ವೇದಿಕೆ ಎಚ್ಚರಿಸಿದೆ. ಮಾ.1ರ ಸಭೆಯಲ್ಲಿ ಶಾಸಕರು ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳ ಪ್ರಮುಖರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ವೇದಿಕೆಯ ಜಿಲ್ಲಾ ಸಂಚಾಲಕ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಮಾತನಾಡಿ, “ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ,” ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮುಖಂಡರಾದ ಆನಂದ ಪೂಜಾರಿ ಕಡಬ, ರಮೇಶ್ ಆಲಂಕಾರು, ಹರೀಶ್ ಕಲ್ಕಾಡಿ ಕೊಯ್ಲ, ಗೋಪಿನಾಥ ಬಂಟ್ರ ಮತ್ತಿತರರು ಉಪಸ್ಥಿತರಿದ್ದರು
