
ಬಿಳಿನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೀರೆ ಗೊಂಡೆ ತಯಾರಿ ಮತ್ತು ಫೋಲ್ಡಿಂಗ್ ತರಬೇತಿ ಆಯೋಜನೆ. ಮಹಿಳಾ ಆರ್ಥಿಕ ಸಬಲೀಕರಣ ಹಾಗೂ ಸ್ವ-ಉದ್ಯೋಗಕ್ಕೆ ಹೆಚ್ಚಿನ ಒತ್ತು.


ಬಿಳಿನೆಲೆ: “ಉದ್ಯೋಗವು ಜೀವನದ ಅತ್ಯಂತ ಪ್ರಮುಖ ಭಾಗ. ನಾವು ಮಾಡುವ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಿದರೆ, ಅದು ಕೇವಲ ಕುಟುಂಬದ ಆರ್ಥಿಕ ಅಭಿವೃದ್ಧಿಗಷ್ಟೇ ಅಲ್ಲದೆ, ಇಡೀ ಸಮಾಜದ ಪ್ರಗತಿಗೆ ಪೂರಕವಾಗುತ್ತದೆ,” ಎಂದು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ದಿನೇಶ್ ಅವರು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆಯ ವತಿಯಿಂದ, ಬಿಳಿನೆಲೆ ವಲಯದ ಆಯ್ದ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಹಾಗೂ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಆಯೋಜಿಸಲಾಗಿದ್ದ ‘ಸೀರೆ ಗೊಂಡೆ ತಯಾರಿ ಹಾಗೂ ಸೀರೆ ಫೋಲ್ಡಿಂಗ್’ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಅಭಿವೃದ್ಧಿಗೆ ಕೌಶಲ್ಯಾಭಿವೃದ್ಧಿಯೇ ಮೂಲಮಂತ್ರ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, “ಧರ್ಮಸ್ಥಳ ಯೋಜನೆಯು ಗ್ರಾಮೀಣ ಭಾಗದ ಜನರಲ್ಲಿ ಸ್ವ-ಉದ್ಯೋಗದ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ. ಪೂಜ್ಯ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ದೂರದೃಷ್ಟಿಯ ‘ಗ್ರಾಮೀಣ ಶ್ರೇಷ್ಟತಾ ಕೇಂದ್ರ’ವು ಇಂದು ಅನೇಕರಿಗೆ ಬದುಕಿನ ದಾರಿ ತೋರಿಸುತ್ತಿದೆ. ಮಹಿಳೆಯರು ತಾವು ಕಲಿಯುವ ಕೌಶಲ್ಯವನ್ನು ಗೌರವಿಸಿ, ಸ್ವಂತ ಉದ್ಯೋಗ ಪ್ರಾರಂಭಿಸಿದರೆ ನೆಮ್ಮದಿಯ ಜೀವನ ನಡೆಸಬಹುದು,” ಎಂದರು.


ಐದು ದಿನಗಳ ಕಾಲ ನುರಿತವರಿಂದ ತರಬೇತಿ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಈ ಶಿಬಿರದಲ್ಲಿ, ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆಯ ಉಪನ್ಯಾಸಕಿ ಧರಣಿ ಅವರು ಶಿಬಿರಾರ್ಥಿಗಳಿಗೆ ತರಬೇತಿಯ ಸೌಲಭ್ಯಗಳು ಮತ್ತು ದಾಖಲಾತಿ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ತರಬೇತಿ ಶಿಕ್ಷಕಿ ಸೌಮ್ಯ ಅವರು ತರಬೇತಿಯ ಅವಧಿಯಲ್ಲಿ ಕಲಿಸಲಾಗುವ ವಿವಿಧ ವಿನ್ಯಾಸದ ಗೊಂಡೆ ತಯಾರಿ ಹಾಗೂ ಸೀರೆ ಮಡಚುವ ವಿಧಾನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ, ಜ್ಞಾನದೀಪಾ ಜ್ಞಾನವಿಕಾಸದ ಸಂಯೋಜಕಿ ಉಷಾ ಸತೀಶ್ , ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಹಾಜರಿದ್ದರು.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ‘ಸೀರೆ ಗೊಂಡೆ’ ಹಾಕುವ ಕಲೆಯ ಬಗ್ಗೆ ತರಬೇತಿ ನೀಡುತ್ತಿರುವುದು ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
