ಕಡಬ: ಕಾಡುಕೋಣ ಅಕ್ರಮ ಬೇಟೆ ಪ್ರಕರಣದಲ್ಲಿ ತನಿಖಾ ಲೋಪವೆಸಗಿದ ಆರೋಪ: ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

kadaba times

ಐತ್ತೂರು ಗ್ರಾಮದಲ್ಲಿ ಕಾಡುಕೋಣ  ಬೇಟೆ ಪ್ರಕರಣದಲ್ಲಿ ತನಿಖಾ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರ ಆದೇಶಿಸಿದ್ದಾರೆ.

kadaba times
uniq

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಐತ್ತೂರು ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕಾಟಿ (ಕಾಡೆಮ್ಮೆ) ಅಕ್ರಮ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಅರಣ್ಯಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಬಿಶ್ವಜಿತ್ ಮಿಶ್ರ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಐತ್ತೂರು ಗ್ರಾಮದ ಬಳಿ ಇತ್ತೀಚೆಗೆ ಕಾಟಿಯೊಂದನ್ನು ಅಕ್ರಮವಾಗಿ ಬೇಟೆಯಾಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅರಣ್ಯಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ಗಂಭೀರ ಲೋಪಗಳು ಸಂಭವಿಸಿವೆ ಎಂಬ ದೂರು ಕೇಳಿಬಂದಿದೆ.

ಈ ಕುರಿತು  ಕಡಬದ ಸಾಮಾಜಿಕ ಕಾರ್ಯಕರ್ತರೊಬ್ಬರು   ಫೆಬ್ರವರಿ 6 ಮತ್ತು 7ರಂದು ಇ-ಮೇಲ್ ಮೂಲಕ ಸಲ್ಲಿಸಿದ ದೂರಿನಲ್ಲಿ, ಸ್ಥಳೀಯ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಯಮಗಳನ್ನು ಗಾಳಿಗೆ ತೂರಿ ತನಿಖೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.  ಈ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಶ್ವಜಿತ್ ಮಿಶ್ರ ಅವರ ಕಚೇರಿ, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ತಕ್ಷಣದ ಕ್ರಮಕ್ಕೆ ಸೂಚನೆ ನೀಡಿದೆ.

kadaba times
kadaba times

ಅರ್ಜಿದಾರರು ನೀಡಿರುವ ದೂರಿನಲ್ಲಿರುವ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ಈ ಪ್ರಕರಣದಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳಿಂದ ಯಾವುದೇ ರೀತಿಯ ಲೋಪವಾಗಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಅರ್ಜಿದಾರರಿಗೆ ಪಾರದರ್ಶಕವಾಗಿ ಮಾಹಿತಿ ಒದಗಿಸುವುದರ ಜೊತೆಗೆ ಕೇಂದ್ರ ಕಚೇರಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಆದೇಶವು ವನ್ಯಜೀವಿ ಅಪರಾಧಗಳ ತನಿಖೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಬಿಶ್ವಜಿತ್ ಮಿಶ್ರ ಅವರ ಈ ಕಟ್ಟುನಿಟ್ಟಿನ ಕ್ರಮವು ಪರಿಸರ ಪ್ರೇಮಿಗಳ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Latest Articles