ಕಡಬ:KSRTC ಬಸ್ ಹೆಡ್ ಲೈಟ್ ದೋಷ: ಮೆಕ್ಯಾನಿಕ್ ಕರೆಸಿ ದುರಸ್ತಿಗೊಳಿಸಿ ಮಾದರಿಯಾದ ಯುವ ಪತ್ರಕರ್ತ

kadaba times

ಮಂಗಳೂರಿನಿಂದ ಕಡಬಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹೆಡ್‌ಲೈಟ್‌ ದೋಷವನ್ನು ಪತ್ರಕರ್ತರೊಬ್ಬರ ಸಹಕಾರದೊಂದಿಗೆ ತಕ್ಷಣವೇ ಮೆಕ್ಯಾನಿಕ್‌ ಕರೆಸಿ ದುರಸ್ತಿಗೊಳಿಸಿ ಮಾದರಿಯಾದ ಘಟನೆ

kadaba times
uniq

ಕಡಬ:  ಇಂದಿನ ದಿನಗಳಲ್ಲಿ ಸಣ್ಣದೊಂದು ಅಚಾತುರ್ಯ ನಡೆದರೂ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಟೀಕಿಸುವವರೇ ಹೆಚ್ಚು. ಆದರೆ ಕಡಬದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕ ಜವಾಬ್ದಾರಿ ಮತ್ತು ಮಾನವೀಯತೆಗೆ ಸಾಕ್ಷಿಯಾಗಿದೆ.  ತಾಂತ್ರಿಕ ದೋಷದಿಂದಾಗಿ ಹೆಡ್‌ಲೈಟ್‌ ಆರಿಹೋಗಿ ಕತ್ತಲಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸನ್ನು ಸಾರ್ವಜನಿಕರೇ ಸೇರಿ ತಕ್ಷಣವೇ ದುರಸ್ತಿಗೊಳಿಸಿ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಂಗಳೂರಿನಿಂದ ಕಡಬ ಕಲ್ಲುಗುಡ್ಡೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ರಾಮಕುಂಜ ತಲುಪುತ್ತಿದ್ದಂತೆ ಎದುರಿನ ಹೆಡ್‌ಲೈಟ್‌ ಹಾಗೂ ಒಳಗಿನ ಲೈಟ್‌ಗಳು ಏಕಾಏಕಿ ಸ್ಥಗಿತಗೊಂಡವು.  ಕತ್ತಲಲ್ಲಿ ಬಸ್‌ ಸಂಚರಿಸುವುದು ಸಂಚಾರಿ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಪ್ರಯಾಣಿಕರ ಜೀವಕ್ಕೂ ಅಪಾಯಕಾರಿಯಾಗಿತ್ತು. ಈ ವೇಳೆ ಬಸ್ಸಿನ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಕಡಬ ನಿವಾಸಿ ನವೀನ್‌ ಕಲ್ಲಾಜೆ ಎಂಬವರು ಈ ಅಪಾಯವನ್ನು ಗಮನಿಸಿ,  ತಕ್ಷಣ ಪತ್ರಕರ್ತ ದಿವಾಕರ  ಅವರ ಗಮನಕ್ಕೆ ತಂದರು.

ಬಸ್‌ ಕಡಬದತ್ತ ಸಾಗುತ್ತಿರುವಾಗಲೇ  ದಿವಾಕರ ಅವರು ವಿಡಿಯೋ ಚಿತ್ರೀಕರಿಸಿ ಚಾಲಕರ ಗಮನ ಸೆಳೆದರು.  ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಬಸ್‌ ನಿಲ್ಲಿಸಿ ಪರಿಶೀಲಿಸಿದರು. ಆದರೆ, ಕಲ್ಲುಗುಡ್ಡೆ ಕಡೆಗೆ ಇದು  ಆ ದಿನದ ಕೊನೆಯ ಬಸ್ಸಾಗಿದ್ದರಿಂದ ಮತ್ತು ಮರುದಿನ ಬೆಳಿಗ್ಗೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಬಸ್‌ ಮುಂದುವರಿಸಲು ಕಂಡಕ್ಟರ್‌ ಹಾಗೂ ಪ್ರಯಾಣಿಕರು ಮನವಿ ಮಾಡಿದರು.

kadaba times
kadaba times

ಬಸ್‌ ಕಡಬ ಪೇಟೆಗೆ ತಲುಪಿದ ಕೂಡಲೇ ಪತ್ರಕರ್ತ ದಿವಾಕರ ಅವರು ಸ್ಥಳೀಯರಾದ ಆಲಿ ಹಳೆ ಸ್ಟೇಷನ್‌ ಹಾಗೂ  ರಮೀಜ್‌ ಪಿಜಕ್ಕಳ ಅವರ ಸಹಕಾರದೊಂದಿಗೆ ಎಲೆಕ್ಟ್ರಿಷಿಯನ್‌ ಒಬ್ಬರನ್ನು ಸ್ಥಳಕ್ಕೆ ಕರೆಸಿದರು.  ಕೇವಲ ಕೆಲವೇ ನಿಮಿಷಗಳಲ್ಲಿ ಹೆಡ್‌ಲೈಟ್‌ ದೋಷವನ್ನು ಸರಿಪಡಿಸಲಾಯಿತು. ಆರಂಭದಲ್ಲಿ ಸಣ್ಣ ಅಸಮಾಧಾನ ವ್ಯಕ್ತಪಡಿಸಿದ್ದ ಚಾಲಕರು, ನಂತರ ಸಾರ್ವಜನಿಕರ ಕಾಳಜಿ ಮತ್ತು ಸಹಕಾರವನ್ನು ಕಂಡು ಧನ್ಯವಾದ ಅರ್ಪಿಸಿ ಸುರಕ್ಷಿತವಾಗಿ ಕಲ್ಲುಗುಡ್ಡೆಯತ್ತ ಪ್ರಯಾಣ ಬೆಳೆಸಿದರು.

ಸರ್ಕಾರವು ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ತಾಂತ್ರಿಕ ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲಾಖೆ ಹೆಚ್ಚಿನ ಗಮನ ಹರಿಸಬೇಕಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಒಟ್ಟಿನಲ್ಲಿ, ಬಸ್ಸಿನ ದೋಷವನ್ನು ಟೀಕಿಸಿ ವಿಡಿಯೋ ವೈರಲ್‌ ಮಾಡುವ ಬದಲು, ನಾಗರಿಕ ಪ್ರಜ್ಞೆ ಮೆರೆದು ಸಮಸ್ಯೆಗೆ ಪರಿಹಾರ ಕಂಡುಕೊಂಡ ಕಡಬದ ತಂಡದ ಕಾರ್ಯ ಈಗ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Related Articles

Latest Articles